89 ಸಾವಿರ ರೂ ಮೌಲ್ಯದ ಕೇಬಲ್ ಕದ್ದ ಕಳ್ಳರನ್ನು ಹೊನ್ನಾವರ ಪೊಲೀಸರು 12 ತಾಸಿನಲ್ಲಿ ಹಿಡಿದಿದ್ದಾರೆ. ಆ ಕಳ್ಳರ ಬಳಿಯಿದ್ದ 69 ಸಾವಿರ ರೂ ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿದ್ದಾರೆ.
ಹೊನ್ನಾವರ ಸಂಶಿಯ ದಾಸಗೋಡಿನ ಮಹಮದ್ ಗೌಸ್ ಹಸನ್ ಸಾಬ್ ಅವರು ಶಾಮಿಯಾನ ಅಳವಡಿಕೆ ಕೆಲಸ ಮಾಡಿಕೊಂಡಿದ್ದು, ಅವರ ಬಳಿಯಿದ್ದ ಬಗೆ ಬಗೆಯ ಕೇಬಲ್ ಕಳ್ಳತನವಾಗಿತ್ತು. ಉಪ್ಪೋಣಿಯಲ್ಲಿ ಅವರು ಗೋಡೌನ್ ಹೊಂದಿದ್ದು, ಅಲ್ಲಿಂದಲೇ ಕಳ್ಳರು ಕೇಬಲ್ ಕದ್ದಿದ್ದರು. ಫೆಬ್ರವರಿ 23ರಂದು ಎಲ್ಲಾ ಸಾಮಗ್ರಿಗಳು ಸರಿಯಾಗಿದ್ದು, ಮಾರ್ಚ 4ರಂದು ಕೇಬಲ್ ಕಳ್ಳತನ ನಡೆದಿರುವುದು ಅವರ ಗಮನಕ್ಕೆ ಬಂದಿತ್ತು. ಈ ಹಿನ್ನಲೆ ಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಅವರು ಮಾರ್ಚ 16ರಂದು ಪೊಲೀಸ್ ದೂರು ನೀಡಿದ್ದರು.
ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಡಿವೈಎಸ್ಪಿ ಗಿರೀಶ ಬಿ, ಪೊಲೀಸ್ ನಿರೀಕ್ಷಕ ಸಿದ್ದರಾಮೇಶ್ವರ ಎಸ್ ಅವರು ಈ ಪ್ರಕರಣ ಗಮನಿಸಿದರು. ಪಿಸೈ ಮಹಾಂತೇಶ ವಾಲ್ಮೀಕಿ ನೇತ್ರತ್ವದಲ್ಲಿ ಪೊಲೀಸ್ ಸಿಬ್ಬಂದಿ ಗಜಾನನ ನಾಯ್ಕ, ಮನೋಜ ಡಿ, ರವಿ ನಾಯ್ಕ ಸೇರಿ ಆರೋಪಿತರನ್ನು ಪತ್ತೆ ಮಾಡಿದರು. ಅದರ ಪ್ರಕಾರ, ಸಂಶಿ ದಾಸಗೋಡಿನ ಅಬ್ದುಲ್ ಗಣಿ ಸಾಬ್ ಹಾಗೂ ಅಪ್ತಾಬ ಮಹಮದ್ ಸಾಬ್ ಸೇರಿ ಕೇಬಲ್ ಕದ್ದಿರುವುದು ಗೊತ್ತಾಯಿತು. ಅವರಿಬ್ಬರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದರು. ಕಳ್ಳರ ಬಳಿಯಿದ್ದ ಬೈಕನ್ನು ವಶಕ್ಕೆಪಡೆದರು.