ಹಳಿಯಾಳ – ದಾಂಡೇಲಿ ಮಾರ್ಗ ಮಧ್ಯದಲ್ಲಿರುವ ಆಲೂರು ಬಳಿ ಆನೆಯೊಂದ ಕೊಟ್ಟಿಗೆಗೆ ನುಗ್ಗಿದೆ. ಆ ಕೊಟ್ಟಿಗೆಯನ್ನು ಸಂಪೂರ್ಣವಾಗಿ ನಾಶ ಮಾಡಿದೆ.
ಆಲೂರಿನ ವಿಷ್ಣು ದಾನಪ್ಪ ವಟ್ಲೆಕರ್ ಅವರು ತಮ್ಮ ಕೃಷಿ ಕಾಯಕದ ಜೊತೆ ಜಾನುವಾರುಗಳನ್ನು ಸಾಕಿದ್ದರು. ಜಾನುವಾರು ರಕ್ಷಣೆಗಾಗಿ ಅವರು ಕೊಟ್ಟಿಗೆ ನಿರ್ಮಿಸಿದ್ದರು. ಹುಲಿ-ಚಿರತೆಯಿಂದ ತಮ್ಮ ಎಮ್ಮೆಗಳನ್ನು ರಕ್ಷಿಸಿಕೊಳ್ಳಲು ಅವರು ಹರಸಾಹಸ ನಡೆಸಿದ್ದರು. ಕೊಟ್ಟಿಗೆ ನಿರ್ಮಾಣದ ನಂತರ ಚಿರತೆ ಭಯ ಕಡಿಮೆ ಆಯಿತಾದರೂ ಆನೆ ದಾಳಿಯನ್ನು ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.
ರಸ್ತೆ ಮೇಲೆ ಓಡಾಡುತ್ತಿದ್ದ ಆನೆ ರಸ್ತೆ ಪಕ್ಕದಲ್ಲಿದ್ದ ಕೊಟ್ಟಿಗೆ ಮೇಲೆ ಕಣ್ಣು ಹಾಯಿಸಿತು. ಅಲ್ಲಿ ಆನೆಗೆ ಸಿಗುವ ಯಾವ ಆಹಾರ ಇಲ್ಲದಿದ್ದರೂ ಕೊಟ್ಟಿಗೆ ಕಡೆ ಪ್ರಯಾಣ ಬೆಳೆಸಿತು. ದನದ ಕೊಟ್ಟಿಗೆಗೆ ನುಗ್ಗಿ ಅದನ್ನು ಸಂಪೂರ್ಣವಾಗಿ ನಾಶಪಡಿಸಿತು. ಈ ವೇಳೆ ಕೊಟ್ಟಿಗೆಯಲ್ಲಿದ್ದ ಎಮ್ಮೆ ಹಾಗೂ ಕರುಗಳು ನಡುಗಿ ಹೋದವು. ಆನೆ ದಾಳಿಗೆ ತತ್ತರಿಸಿದ ಅವರು ಮೂಲೆ ಸೇರಿ ಪ್ರಾಣ ಉಳಿಸಿಕೊಂಡವು.
ಈ ಭಾಗದ ರಸ್ತೆ ಅಂಚಿನಲ್ಲಿ ಇನ್ನಷ್ಟು ರೈತರು ಕೊಟ್ಟಿಗೆ ನಿರ್ಮಿಸಿದ್ದು, ಆನೆ ಉಪಟಳಕ್ಕೆ ಅವರು ಬೆದರಿದ್ದಾರೆ. ಕೂಡಲೇ ಆ ಆನೆಯನ್ನು ಅಲ್ಲಿಂದ ಸ್ಥಳಾಂತರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ. `ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಹಾನಿ ಅನುಭವಿಸಿದ ರೈತನಿಗೆ ಯೋಗ್ಯ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.