ಕಾರವಾರದ ಸದಾಶಿವಗಡ ಲಯನ್ಸ್ ಕ್ಲಬ್ ಹಾಗೂ ದಲಿತ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ವಸಂತ ಬಾಂದೇಕರ ವಿರಚಿತ `ಕಾನೂನು ಅರಿವು-ನೆರವು ಕವನ ಸಂಕಲನ’ ಬಿಡುಗಡೆ ಮಾಡಲಾಗಿದೆ. ಕಾರವಾರದ ಕರ್ನಾಟಕ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಕವನ ಸಂಕಲನ ಲೋಕಾರ್ಪಣೆ ನಡೆದಿದೆ.
ಪ್ರಾದೇಶಿಕ ವಿಜ್ಞಾನ ಕೇಂದ್ರದ ಆಡಳಿತಾಧಿಕಾರಿ ಶಿವಕುಮಾರ್ ಹರಗಿ ಅವರು `ಹಿರಿಯ ಕವಿಗಳ ಮನದಲ್ಲಿ ಅರಳಿದ ಕವನ ಸಂಕಲನವನ್ನು ಲೋಕಾರ್ಪಣೆ ಮಾಡುತ್ತಿರುವುದು ಅತ್ಯಂತ ಹೆಮ್ಮೆ ಅನಿಸಿದೆ. ವರ್ತಮಾನದ ನಿದರ್ಶನಗಳಿಗೆ ಪ್ರಸ್ತುತ ಕಾನೂನು ಅರಿವು – ನೆರವು ಕವನಗಳ ಹೊತ್ತಿಗೆ ಕನ್ನಡಿಯಾಗಿದೆ’ ಎಂದು ಹೇಳಿದ್ದಾರೆ. ಕವನ ಸಂಕಲನದ ಸಂಪಾದಕರಾದ ಗುರೂಜಿ ಆರ್ ಜಿ ಪ್ರಭು ಅವರು ವಸಂತ ಬಾಂದೇಕರ್ ಅವರ ಕ್ರಿಯಾಶೀಲತೆಯ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ನ್ಯಾಯವಾದಿ ವರದಾ ನಾಯ್ಕ ಅವರು `ಕಾನೂನಿನ ಅರಿವು ಎಲ್ಲರಿಗೂ ಅತ್ಯಗತ್ಯವಾಗಿದ್ದು, ಅದರ ಸಮಗ್ರತೆಯನ್ನು ಈ ಕವನ ಸಂಕಲನ ಒಳಗೊಂಡಿದೆ’ ಎಂದು ಹೇಳಿದ್ದಾರೆ.
ನಗರಸಭೆಯ ಮಾಜಿ ಸದಸ್ಯರಾದ ದಿವ್ಯಾ ನಾಯ್ಕ ಅವರು `ಮಹಿಳಾ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಪುಸ್ತಕ ಬಿಡುಗಡೆ ಮಾಡಿರುವದು ಖಷಿಯ ಸಂಗತಿ’ ಎಂದಿದ್ದಾರೆ. ಸಮಾಜ ಸೇವಕ ಶ್ರೀಕಾಂತ ನಾಯ್ಕ ಅವರು `ಸಾಮಾಜಿಕವಾಗಿ ಸ್ವಾಸ್ಥ್ಯ ಮನಸ್ಸನ್ನು ನಾವೆಲ್ಲರೂ ಪಡೆಯಬೇಕಾಗಿದೆ’ ಎಂದಿದ್ದಾರೆ. ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ನವೀನ ದೇವರಬಾವಿ ಅವರು ಅಧ್ಯಕ್ಷೀಯ ಭಾಷಣ ಮಾಡಿದ್ದಾರೆ. ಪ್ರಮುಖರಾದ ಶಿವಾನಂದ ಮೇತ್ರಿ, ರಂಜನಾ ಗುರವ, ಹನುಮಂತಪ್ಪ, ಲಕ್ಷ್ಮಿ ಬಾಂದೇಕರ ವೇದಿಕೆಯಲ್ಲಿದ್ದರು. ಸಂಗೀತಾ ಅವರು ಪ್ರಾರ್ಥಿಸಿದ್ದು, ಗಣೇಶ ಬಿಷ್ಟಣ್ಣನವರ ಅವರು ಸ್ವಾಗತಿಸಿದರು. ಸೀಮಾ ಗೌಡ ಅವರು ನಿರೂಪಿಸಿದರು. ಲೇಖಕರಾದ ವಸಂತ ಬಾಂದೇಕರ ಅವರು ವಂದಿಸಿದರು.