ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರಿಗೆ ಫಸಲ್ ಭೀಮಾ ಯೋಜನೆ ಪರಿಹಾರ ಮೊತ್ತ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ. ಶಿರಸಿಯ ಬಂಡಲ್ ಗ್ರಾಮಸ್ಥರಿಗೆ ಪ್ರತಿ ಗುಂಟೆಗೆ 909ರೂಪಾಯಿಯಂತೆ ಜಮಾ ಆಗುತ್ತಿದ್ದು, ಅದೇ ತಾಲೂಕಿನ ದೊಡ್ನಳ್ಳಿ ಗ್ರಾಮದವರಿಗೆ ಗುಂಟೆಗೆ 50ರೂ ಮಾತ್ರ ಜಮಾ ಆಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಡಿಕೆ ಹಾಗೂ ಕಾಳು ಮೆಣಸು ಬೆಳೆಗಾರರಿಗೆ ಹಂತ ಹಂತವಾಗಿ ಫಸಲ್ ಭೀಮಾ ಯೋಜನೆಯ ಬೆಳೆ ವಿಮೆ ಜಮೆ ಆಗುತ್ತಿದೆ. ಒಟ್ಟು ಮೂರು ಹಂತದಲ್ಲಿ ಈ ಪರಿಹಾರ ಹಣ ಬಿಡುಗಡೆಯಾಗಿದ್ದು, ಇಡೀ ಜಿಲ್ಲೆಗೆ ಸುಮಾರು 85ಕೋಟಿ ರೂ ಬರುವ ನಿರೀಕ್ಷೆಯಿದೆ. ಸದ್ಯ ಶಿರಸಿ, ಹೊನ್ನಾವರ, ಯಲ್ಲಾಪುರ, ಹಳಿಯಾಳ, ಜೊಯಿಡಾ ತಾಲೂಕಿನ ಕೆಲ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರ ಖಾತೆಗೆ ಹಣ ಸಂದಾಯವಾಗಿದೆ. ಪ್ರಕೃತಿ ವಿಕೋಪದ ಅಡಿ ಆದ ಹಾನಿ, ಹಾನಿ ವೇಳೆ ಇದ್ದ ಹವಾಮಾನ ಆಧರಿಸಿ ವಿಮೆ ಮಾಡಿಸಿದವರಿಗೆ ಪರಿಹಾರ ನೀಡಲಾಗುತ್ತಿದೆ. ಬೆಳೆ ವಿಮೆ ಪರಿಹಾರ ಒದಗಿಸುವುದಕ್ಕಾಗಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೇಂದ್ರದ ಮೇಲೆ ಒತ್ತಡ ಹಾಕಿದ್ದು, ಅದರ ಪರಿಣಾಮವಾಗಿ ರೈತರ ಖಾತೆಗೆ ಹಣ ಬರುತ್ತಿದೆ.
ಈಗಾಗಲೇ ಜಮಾ ಆದ ಹಣದ ಪಟ್ಟಿ ಮೊಬೈಲ್ ಮಿಡಿಯಾ ನೆಟ್‌ವರ್ಕಗೆ ಸಿಕ್ಕಿದ್ದು, ಅದರ ಆಧಾರದಲ್ಲಿ ಪರಿಶೀಲಿಸಿದಾಗ ಶಿರಸಿಯ ಬಂಡಲ್ ಗ್ರಾಮದ ರೈತರ ಖಾತೆಗೆ ಹೆಚ್ಚಿನ ಮೊತ್ತ ಸಂದಾಯವಾಗಿದೆ. ಅತಿ ಕಡಿಮೆ ಮೊತ್ತವೂ ಶಿರಸಿ ತಾಲೂಕಿನ ರೈತರಿಗೆ ಸಿಕ್ಕಿದ್ದು, ದೊಡ್ನಳ್ಳಿ ಭಾಗದ ರೈತರ ಖಾತೆಗೆ ಗುಂಟೆಗೆ 50ರೂ ಹಾಗೂ ಬೈರುಂಭೆ ಭಾಗದ ರೈತರಿಗೆ ಗುಂಟೆಗೆ 99ರೂ ಆಧಾರದಲ್ಲಿ ಹಣ ಜಮಾ ಆಗುತ್ತಿದೆ. ಇದರೊಂದಿಗೆ ಹೊನ್ನಾವರದ ಬಳಕೂರು ಗ್ರಾಮದವರಿಗೆ ಗುಂಟೆಗೆ 681ರೂ, ಚಂದಾವರ ಭಾಗದವರಿಗೆ ಗುಂಟೆಗೆ 684ರೂ, ಹಳದಿಪುರ ಭಾಗದವರಿಗೆ 649ರೂ, ಹೊಸಕುಳಿ ಭಾಗದವರಿಗೆ 708ರೂ, ಕಡತೋಕ ಕಡೆ 680ರೂ, ಕಡ್ಲೆ ಕಡೆ 657ರೂ ಕೆಳಗನೂರು ಭಾಗದ ರೈತರಿಗೆ 631ರೂ, ಕೋಡಾಣಿ ಭಾಗದ ರೈತರಿಗೆ 707ರೂ, ಮಾಗೋಡ ಭಾಗದ ರೈತರಿಗೆ 808ರೂ, ಮೇಲಿನ ಇಡಗುಂಜಿ ಕಡೆ 761ರೂ, ನವಿಲಗೋಣದಲ್ಲಿ 649ರೂ ಹಾಗೂ ಸಾಲಕೋಡ ಭಾಗದಲ್ಲಿ 708ರೂ ದರದಲ್ಲಿ ಪ್ರತಿ ಗುಂಟೆಗೆ ಬೆಳೆ ವಿಮಾ ಪರಿಹಾರ ಸಿಗುತ್ತಿದೆ. ಹೊನ್ನಾವರದಲ್ಲಿ ಮಂಕಿ ಅನಂತವಾಡಿ ಭಾಗದವರಿಗೆ ಕಡಿಮೆ ಅಂದರೆ, ಪ್ರತಿ ಗುಂಟೆಗೆ 320ರೂ ದರದಲ್ಲಿ ಬೆಳೆ ವಿಮೆ ಪರಿಹಾರ ಸಿಗುತ್ತಿದೆ.
ಶಿರಸಿಯ ಬಂಡಲ್ ಹೊರತುಪಡಿಸಿದರೆ ಸಿದ್ದಾಪುರ ತಾಲೂಕಿನ ಹೆಗ್ಗರಣಿ ಭಾಗದ ರೈತರಿಗೆ ಹೆಚ್ಚಿನ ಮೊತ್ತದ ಪರಿಹಾರ ಸಿಕ್ಕಿದೆ. ಸಿದ್ದಾಪುರದ ಹೆಗ್ಗರಣಿ ಭಾಗದಲ್ಲಿ ಪ್ರತಿ ಗುಂಟೆಗೆ 890ರೂ, ನೀಲಕೋಡ ಭಾಗದವರಿಗೆ ಗರಿಷ್ಟ 890ರೂ ಹಾಗೂ ತಡಾಗುಂಡಿ ಭಾಗದಲ್ಲಿ 890ರೂ ಪರಿಹಾರ ಸಿಕ್ಕಿದೆ. ಸಿದ್ದಾಪುರದ ತಾರಹಳ್ಳಿ ಕಾನಸೂರು ಹಾಗೂ ತ್ಯಾಗಲಿ ಭಾಗದ ರೈತರಿಗೆ ಕನಿಷ್ಟ ಪ್ರತಿ ಗುಂಟೆಗೆ 126ರೂ ದರದಲ್ಲಿ ಪರಿಹಾರ ಜಮಾ ಆಗುತ್ತಿದೆ. ಇನ್ನೂ ಶಿರಸಿಯ ಕಾನಗೋಡು ಭಾಗದಲ್ಲಿ 661ರೂ, ಉಂಚಳ್ಳಿ ಕಡೆ 671ರೂ ಹಾಗೂ ವಾನಳ್ಳಿ ರೈತರಿಗೆ ಪ್ರತಿ ಗುಂಟೆಗೆ 641ರೂ ಗರಿಷ್ಟ ಪ್ರಮಾಣದಲ್ಲಿ ಬೆಳೆ ವಿಮೆ ಪರಿಹಾರ ದೊರೆತಿದೆ. ಮುಂಡಗೋಡ ಬೆಡಸಗಾಂವ್ ಗ್ರಾಮಕ್ಕೆ ಗರಿಷ್ಟ 768ರೂ ಪರಿಹಾರ ಸಿಕ್ಕಿದೆ. ಮುಂಡಗೋಡಿನ ಮಳಗಿ ಭಾಗದ ರೈತರಿಗೆ 139ರೂ ದರದಲ್ಲಿ ಬೆಳೆ ಪರಿಹಾರ ದೊರೆಯುತ್ತಿದೆ. ಯಲ್ಲಾಪುರದ ಉಮ್ಮಚ್ಗಿ ಭಾಗದಲ್ಲಿ 440ರೂ, ಇಡಗುಂದಿ ಭಾಗದ ರೈತರಿಗೆ 259ರೂ, ಕುಂದರಗಿ 185ರೂ ಹಾಗೂ ಪಟ್ಟಣದ ಪ್ರದೇಶದವರಿಗೆ 335ರೂ ಪ್ರತಿ ಗುಂಟೆ ದರದಲ್ಲಿ ಬೆಳೆ ವಿಮೆ ಪರಿಹಾರ ಸಿಗುತ್ತಿದೆ.
ಜೊಯಿಡಾದ ಅಣಶಿ 606ರೂ ಗರಿಷ್ಟ ಪ್ರಮಾಣದ ಬೆಳೆ ವಿಮೆ ಪರಿಹಾರ ದೊರೆತಿದ್ದು, ಜೊಯಿಡಾದ ಅಸು ಗ್ರಾಮದವರಿಗೆ ಬರೇ 72ರೂ ದರದಲ್ಲಿ ಪ್ರತಿ ಗುಂಟೆಗೆ ಪರಿಹಾರ ಸಿಗುತ್ತಿದೆ. ಹಳಿಯಾಳ ಮದ್ನಳ್ಳಿ 545ರೂ ಪರಿಹಾರ ಸಿಗುತ್ತಿದ್ದು, ಹಳಿಯಾಳದ ಉಳಿದ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯ ರೈತರಿಗೂ ಪ್ರತಿ ಗುಂಟೆಗೆ 520ರೂ ದರದಲ್ಲಿ ಏಕರೂಪದ ಪರಿಹಾರ ಸಿಗುತ್ತಿದೆ. ದಾಂಡೇಲಿ ಭಾಗದ ಆಲೂರು ಹಾಗೂ ಅಂಬಿಕಾನಗರದ ರೈತರಿಗೂ ಗುಂಟೆಗೆ 520ರೂ ದರದಲ್ಲಿ ಪರಿಹಾರ ಜಮಾ ಆಗುತ್ತಿದೆ. `ಮಳೆ ಮಾಪನ ಕೇಂದ್ರ ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಅರ್ಹ ರೈತರಿಗೆ ಸರಿಯಾದ ಪರಿಹಾರ ಹಣ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ ನೀಡಿದರೂ ರಾಜ್ಯ ಸರ್ಕಾರ ಮಳೆ ಮಾಪನ ಕೇಂದ್ರ ಸರಿಪಡಿಸಿಲ್ಲ’ ಎಂಬುದು ಸಂಸದರ ಆರೋಪ.