`ಗೌರಿಬಿದನೂರಿನ ಉಚ್ಚೋದನಹಳ್ಳಿಯ ಜೀರ್ಣೋದ್ಧಾರಗೊಂಡ ಸಲ್ಲಾಪುರದಮ್ಮ ದೇವಸ್ಥಾನಕ್ಕೆ ಪರಿಶಿಷ್ಟ ಜಾತಿಯ ಜನರಿಗೆ ಪ್ರವೇಶ ನಿರಾಕರಿಸಿರುವ ಘಟನೆ ಅಮಾನವೀಯವಾಗಿದ್ದು, ಇದು ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರ’ ಎಂದು ಎಂದು ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಅವರು ಹೇಳಿದ್ದಾರೆ.
Advertisement. Scroll to continue reading.
`ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಇಂದಿಗೂ ದೇವಸ್ಥಾನ ಪ್ರವೇಶದಂತಹ ಹಕ್ಕುಗಳಿಗಾಗಿ ಹೋರಾಡಬೇಕಿರುವುದು ಖೇದನೀಯ. ಬಸವಣ್ಣ, ಅಂಬೇಡ್ಕರ್ ಅವರಂತಹ ಮಹನೀಯರು ಸಮಾನತೆಯ ಸಂದೇಶ ಸಾರಿದ ಈ ನಾಡಿನಲ್ಲಿ ಇಂತಹ ಅನಿಷ್ಠ ಪದ್ಧತಿಗಳು ಮರುಕಳಿಸುತ್ತಿರುವುದು ಸಾಮಾಜಿಕ ವ್ಯವಸ್ಥೆಯ ದುರಂತ’ ಎಂದವರು ಹೇಳಿದ್ದಾರೆ. `ಸ್ವಾತಂತ್ರ್ಯಪೂರ್ವದಲ್ಲೇ ಮಹಾತ್ಮ ಗಾಂಧೀಜಿಯವರು ಕಾರವಾರ ಮತ್ತು ಉಡುಪಿಗೆ ಭೇಟಿ ನೀಡಿ ಹರಿಜನರ ಹಕ್ಕುಗಳಿಗಾಗಿ ಜಾಗೃತಿ ಮೂಡಿಸಿದ್ದರು. ಅಂದು ಕನಕದಾಸರಿಗೆ ದೇವಸ್ಥಾನದ ಪ್ರವೇಶ ನಿರಾಕರಿಸಿದಾಗ ಅವರ ನಿಷ್ಕಲ್ಮಶ ಭಕ್ತಿಗೆ ಮೆಚ್ಚಿ ಕೃಷ್ಣನೇ ತಿರುಗಿ ದರ್ಶನ ನೀಡಿದ ನಿದರ್ಶನವಿದೆ. ಅಸ್ಪೃಶ್ಯತೆ ಎಂಬ ಅನಿಷ್ಠದ ವಿರುದ್ಧ ಸಮರ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾದಸ್ಪರ್ಶವಾದ ಈ ಪುಣ್ಯಭೂಮಿ ಕರ್ನಾಟಕದಲ್ಲಿ ಜಾತಿ ವೈಷಮ್ಯದ ಕಿಡಿ ಹಬ್ಬುತ್ತಿರುವುದು ಬೇಸರದ ಸಂಗತಿ’ ಎಂದವರು ಹೇಳಿದ್ದಾರೆ.
`ದೇವಸ್ಥಾನದ ಜೀರ್ಣೋದ್ಧಾರ ಕಾಯಕದಲ್ಲಿ ದಲಿತರ ಸಹಕಾರವೂ ಇತ್ತು. ಆದರೆ, ಜೀರ್ಣೋದ್ಧಾರದ ನಂತರ ಪೂಜೆಗೆ ಅವಕಾಶ ಕೇಳಿದರೆ ನಿರಾಕರಿಸಿರುವುದು, ಎಐ ಕಾಲಘಟ್ಟದಲ್ಲೂ ನಮ್ಮ ಸಮಾಜ ಇಂದಿಗೂ ಮೂಢನಂಬಿಕೆಯೆoಬ ಸುಳಿವಿನಿಂದ ಹೊರಬರದಿರುವುದು ಖೇದಕರ’ ಎಂದಿದ್ದಾರೆ. `ಘಟನೆಗೆ ಸಂಬoಧಿಸಿದವರ ವಿರುದ್ಧ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೇವಲ ಶಿಕ್ಷೆಯಷ್ಟೇ ಸಾಲದು, ಅಧಿಕಾರಿಗಳು ಗ್ರಾಮ ಮಟ್ಟದಲ್ಲಿ ಅಸ್ಪೃಶ್ಯತೆ ವಿರುದ್ಧ ಸಮರೋಪಾದಿಯಲ್ಲಿ ಜನಜಾಗೃತಿ ಮೂಡಿಸಬೇಕು. ಸಂವಿಧಾನದ ಆಶಯದಂತೆ ಪ್ರತಿಯೊಬ್ಬರಿಗೂ ಸಮಾನ ಗೌರವ ದೊರೆಯುವುದನ್ನು ಆಡಳಿತ ವರ್ಗವು ಖಚಿತಪಡಿಸಿಕೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.