ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಫೋನ್ ಮಾಡಿದ ವ್ಯಕ್ತಿಗೆ ಜೊಯಿಡಾದ ಬಾಬು ಕರೋಶಿ ಅವರು 5 ಬಾರಿ ಓಟಿಪಿ ಹೇಳಿದ್ದಾರೆ. ಹೀಗಾಗಿ ಬಾಬು ಕರೋಶಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 81500ರೂ ಹಣ ಖಾಲಿ ಆಗಿದೆ!
ಜೊಯಿಡಾದ ಗಾವಡೆವಾಡದಲ್ಲಿ ಬಾಬು ಸಿದ್ರಾಮಪ್ಪ ಕರೋಶಿ (57) ಅವರು ವಾಸವಾಗಿದ್ದಾರೆ. ಅವರು ಚಾಲಕರಾಗಿ ತಮ್ಮ ಕುಟುಂಬ ನಿರ್ವಹಿಸುತ್ತಿದ್ದಾರೆ. ತಮ್ಮ ಉಳಿತಾಯದ ಹಣವನ್ನು ಅವರು ಕೆನರಾ ಬ್ಯಾಂಕ್ ಖಾತೆಯಲ್ಲಿರಿಸಿದ್ದು, ಸಮಯಕ್ಕೆ ಸರಿಯಾಗಿ ಬಡ್ಡಿ ಸಿಗುವುದರಿಂದ ಬ್ಯಾಂಕ್ ಸಿಬ್ಬಂದಿಯನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ಹೀಗಾಗಿ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಯಾರೇ ಫೋನ್ ಮಾಡಿದರೂ ಬಾಬು ಕರೋಶಿ ಅವರು ತಕ್ಷಣ ಸ್ಪಂದಿಸುತ್ತಾರೆ.
ಹೀಗಿರುವಾಗ ಫೆಬ್ರವರಿ 2ರಂದು ಸಂಜೆ 5.38ಕ್ಕೆ ಬಾಬು ಕರೋಶಿ ಅವರಿಗೆ ಅಪರಿಚಿತ ಸಂಖ್ಯೆಯಿAದ ಫೋನ್ ಬಂದಿದೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತಮ್ಮನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿದ್ದಾರೆ. ಬಾಬು ಕರೋಶಿ ಅವರು ಅತ್ಯಂತ ವಿನಯದಿಂದ ಅವರಿಗೆ `ನಮಸ್ಕಾರ’ ಹೇಳಿ ಮಾತು ಶುರು ಮಾಡಿದ್ದಾರೆ. `ನಿಮ್ಮ ಎಟಿಎಂ ಕಾರ್ಡ ಬ್ಲಾಕ್ ಆಗಿದೆ. ಅದನ್ನು ರಿನಿವಲ್ ಮಾಡಿಕೊಳ್ಳಬೇಕು’ ಎಂದು ಆ ಕಡೆಯಿಂದ ಮಾತನಾಡಿದವರು ಹೇಳಿದ್ದಾರೆ. `ಎಟಿಎಂ ಮೇಲೆ ನಮೂದಿಸಿದ 16 ಸಂಖ್ಯೆಯನ್ನು ಹೇಳಿ’ ಎಂದು ಫೋನ್ ಮಾಡಿದವರು ಕೇಳಿದ್ದಾರೆ. ಆ ಸಂಖ್ಯೆ ಹೇಳಿದ ನಂತರ ಎಟಿಎಂ ಕಾರ್ಡಿನ ಹಿಂದಿರುವ `ಸಿವಿವಿ’ ಹೇಳುವಂತೆ ಸೂಚಿಸಿದ್ದಾರೆ.
ಬ್ಯಾಂಕಿನವರ ಬಳಿ ಸುಳ್ಳು ಹೇಳಬಾರದು ಎಂದು ಭಾವಿಸಿದ ಬಾಬು ಕರೋಶಿ ಅವರು `ಸಿವಿವಿ’ ಸಂಖ್ಯೆಯನ್ನು ಹೇಳಿದ್ದಾರೆ. ಅದಾದ ನಂತರ ಅವರ ಮೊಬೈಲಿಗೆ ಐದು ಬಾರಿ ಓಟಿಪಿ ಬಂದಿದೆ. ಆ ಸಂಖ್ಯೆಯನ್ನು ಸಹ ಬಾಬು ಕರೋಶಿ ಅವರು ಅತ್ಯಂತ ಪ್ರಾಮಾಣಿಕತೆಯಿಂದ ಫೋನ್ ಮಾಡಿದವರಿಗೆ ಒಪ್ಪಿಸಿದ್ದಾರೆ. ಆ ಫೋನ್ ಕಟ್ ಆಗುವಷ್ಟರ ಹೊತ್ತಿಗೆ ಬಾಬು ಕರೋಶಿ ಅವರ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ 81500ರೂ ಕಾಣೆಯಾಗಿದೆ. ಮರುದಿನ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅಲ್ಲಿನ `ಮ್ಯಾನೇಜರ್ ಫೋನ್ ಮಾಡಿಲ್ಲ’ ಎಂಬ ವಿಷಯ ಗೊತ್ತಾಗಿದೆ.
ದುಡಿದ ಹಣ ಕಳೆದುಕೊಂಡ ಬಾಬು ಕರೋಶಿ ಅವರು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಫೋನ್ ಮಾಡಿದ ವ್ಯಕ್ತಿಯ ಫೋನ್ ನಂ ನೀಡಿ ತಮಗಾದ ಮೋಸದ ಬಗ್ಗೆ ಹೇಳಿದ್ದಾರೆ. ಸೈಬರ್ ಅಪರಾಧದ ಬಗ್ಗೆ ಅರಿವು ಮೂಡಿಸಿದ ಜೊಯಿಡಾ ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕನ ಹುಡುಕಾಟ ಶುರು ಮಾಡಿದ್ದಾರೆ.