ದೇಶ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಸೈನಿಕರೊಬ್ಬರು ನಿವೃತ್ತಿ ನಂತರ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕಿಲ್ಲ. ಎರಡು ತಾಸು ಕಾದರೂ ಆಂಬುಲೆನ್ಸ್ ಸಿಗದ ಕಾರಣ ಅವರು ನರಳಿ ನರಳಿ ಸಾವನಪ್ಪಿದ್ದಾರೆ.
`ದೇಶಕ್ಕಾಗಿ ಏನನ್ನಾದರೂ ಮಾಡಬೇಕು’ ಎಂದು ಹಳಿಯಾಳದ ಬಸ್ಟ್ಯಾಂನ್ ಸಂತಾನ ಬ್ರೀಗ್ಯಾಜಾ ಅವರು ಬಾಲ್ಯದಲ್ಲಿಯೇ ಕನಸು ಕಂಡಿದ್ದರು. ಅದಕ್ಕಾಗಿ ಅವರು ಸೈನಿಕರಾಗಲು ನಿರ್ಧರಿಸಿದರು. ಕಠಿಣ ಪರಿಶ್ರಮ, ನಿರಂತರ ಪ್ರಯತ್ನದ ಜೊತೆ ಗುರಿ ಸಾಧನೆಗಾಗಿ ಸಾಕಷ್ಟು ಶ್ರಮಿಸಿ ಅವರು ತಮ್ಮ ಕನಸಿನ ಕೆಲಸಕ್ಕೆ ಸೇರಿದರು. ಸೈನಿಕರಾಗಿ ಅವರು ವಿವಿಧ ಕಡೆ ಸೇವೆ ಸಲ್ಲಿಸಿದರು. ಬಸ್ಟ್ಯಾಂನ್ ಬ್ರೀಗ್ಯಾಜಾ ಅವರು ನಿವೃತ್ತಿ ನಂತರ ತವರಿಗೆ ಮರಳಿದ್ದು, ಇಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿದ್ದರು.
ಕೆಲ ದಿನಗಳ ಹಿಂದೆ ಬಸ್ಟ್ಯಾಂನ್ ಬ್ರೀಗ್ಯಾಜಾ ಅವರು ಅನಾರೋಗ್ಯಕ್ಕೆ ಒಳಗಾದರು. ಕುಟುಂಬದವರು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆರೋಗ್ಯದಲ್ಲಿ ವ್ಯತ್ಯಾಸವಾದ ಕಾರಣ ಬಸ್ಟ್ಯಾಂನ್ ಬ್ರೀಗ್ಯಾಜಾ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು ಅವರ ಆಪ್ತರು ನಿರ್ಣಯಿಸಿದರು. ಭಾನುವಾರ ನಸುಕಿನ 4 ಗಂಟೆಗೆ ಅವರನ್ನು ಉನ್ನತ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಎಷ್ಟು ಸಲ ಫೋನ್ ಮಾಡಿದರೂ 108 ಆಂಬುಲೆನ್ಸ್ ಸೇವೆ ಸಿಗಲಿಲ್ಲ. ಎರಡು ತಾಸು ಕಾದರೂ ಆಂಬುಲೆನ್ಸ್ ಸಿಗದ ಕಾರಣ ಬಸ್ಟ್ಯಾಂನ್ ಬ್ರೀಗ್ಯಾಜಾ ಅವರನ್ನು ಹುಬ್ಬಳ್ಳಿಗೆ ಕರೆದೊಯ್ಯಲು ಆಗಲಿಲ್ಲ. ಪರಿಣಾಮ ಅವರು ಮಲಗಿದ ಹಾಸಿಗೆಯಲ್ಲಿಯೇ ಕೊನೆಯುಸಿರೆಳೆದರು.
`ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಕ್ಕಿದ್ದರೆ ತಂದೆಯನ್ನು ಬದುಕಿಸಬಹುದಾಗಿತ್ತು. ಆದರೆ, ತುರ್ತು ಸನ್ನಿವೇಶದಲ್ಲಿಯೂ ಸೇವೆ ಸಿಗದ ಕಾರಣ ತಾನೂ ತಂದೆಯನ್ನು ಕಳೆದುಕೊಂಡಿದ್ದೇನೆ’ ಎಂದು ಅವರ ಮಗ ಮನು ಬ್ರೀಗ್ಯಾಜಾ ಅವರು ವಿವರಿಸಿದರು. `ಯಾರಿಗೂ ಇಂಥ ಪರಿಸ್ಥಿತಿ ಬರಬಾರದು. ಅದರಲ್ಲಿಯೂ, ದೇಶ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟ ಸೈನಿಕರಿಗೆ ಹೀಗಾಗಬಾರದಿತ್ತು’ ಎಂದವರು ನೋವು ತೋಡಿಕೊಂಡರು. `ಹಳಿಯಾಳ ಹಾಗೂ ದಾಂಡೇಲಿ ಭಾಗದಲ್ಲಿ ಕಳೆದ 15 ದಿನಗಳಿಂದ ಆಂಬುಲೆನ್ಸ್ ಸೇವೆ ಸರಿಯಾಗಿಲ್ಲ’ ಎಂದು ಆ ಭಾಗದವರು ದೂರಿದರು.
`108 ಸೇವೆ ಸರಿಯಾಗಿಲ್ಲ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ ಬರುತ್ತಿಲ್ಲ. ಮೊದಲು 108 ವಾಹನವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ವಹಿಸಲಾಗಿದ್ದು, ಇದೀಗ ಅದರ ಸೇವೆಯನ್ನು ಪ್ರತ್ಯೇಕಿಸಲಾಗಿದೆ. ಫೋನ್ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬುದು ಸತ್ಯ’ ಎಂದು ತಾಲೂಕು ಆಡಳಿತಾಧಿಕಾರಿ ಅನಿಲಕುಮಾರ ಅವರು ವಾಸ್ತವ ಬಿಚ್ಚಿಟ್ಟರು. `ತಾಲೂಕು ಆಸ್ಪತ್ರೆಯಲ್ಲಿ ಎರಡು ಆಂಬುಲೆನ್ಸ್ ಇದೆ. ತುರ್ತು ಸನ್ನಿವೇಶದಲ್ಲಿ ಅದನ್ನು ಬಳಸಬಹುದಾಗಿದ್ದು, ಎರಡೂ ಆಂಬುಲೆನ್ಸ್ ಲಭ್ಯವಿಲ್ಲದಿದ್ದರೆ ಸಮಸ್ಯೆ ಆಗಲಿದೆ’ ಎಂದವರು ಸ್ಪಷ್ಟಪಡಿಸಿದರು.