ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಕಂಟೇನರ್ ಲಾರಿ ಹಾಯಿಸುವ ಪ್ರಯತ್ನ ಮಾಡಿದ್ದಾರೆ. ವೇಗವಾಗಿ ಲಾರಿ ಬರುವುದನ್ನು ನೋಡಿದ ಪೊಲೀಸ್ ಸಿಬ್ಬಂದಿ ತಾವು ನಿಂತ ಸ್ಥಳದಿಂದ ಗಟಾರದ ಕಡೆ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಅದಾಗಿಯೂ, ಪೊಲೀಸ್ ಸಿಬ್ಬಂದಿ ಕೈ-ಕಾಲಿಗೆ ಗಾಯವಾಗಿದೆ.
Advertisement. Scroll to continue reading.
ಕಾರವಾರ ಸಂಚಾರ ಪೊಲೀಸ್ ಠಾಣೆಯಲ್ಲಿ ಶೈಲೇಶ ಮಾಧವ ನಾಯಕ (55) ಅವರು ಕರ್ತವ್ಯದಲ್ಲಿದ್ದಾರೆ. ಅವರ ಮೇಲೆ ಉತ್ತರ ಪ್ರದೇಶದ ವಿಜಯಕುಮಾರ ಪೊಲಚಂದ್ರ ಅವರು ಕಂಟೇನರ್ ಲಾರಿ ಹಾಯಿಸುವ ಪ್ರಯತ್ನ ಮಾಡಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ವಿಜಯಕುಮಾರ ಪೊಲಚಂದ್ರ ಅವರು ಲಾರಿ ಹಾಯಿಸಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿ ಆಗುವಂತೆ ಅವರು ವರ್ತಿಸಿದ ಬಗ್ಗೆ ಶೈಲೇಶ ನಾಯಕ ಅವರು ದೂರಿದ್ದಾರೆ.
ಮಾರ್ಚ 9ರಂದು ಕಾರವಾರದ ಲಂಡನ್ ಬ್ರಿಜ್ ಬಳಿ ಈ ವಿದ್ಯಮಾನ ನಡೆದಿದೆ. ಆ ದಿನ ಶೈಲೇಶ ನಾಯಕ ಅವರು ಅಲ್ಲಿ ಸುಗಮ ಸಂಚಾರ ನೋಡಿಕೊಳ್ಳುವ ಜವಾಬ್ದಾರಿಹೊಂದಿದ್ದು, ವಿಜಯಕುಮಾರ ಪೊಲಚಂದ್ರ ಅವರು ಕಂಟೇನರ್ ಲಾರಿ ಓಡಿಸಿಕೊಂಡು ಬಂದಿದ್ದಾರೆ. ಲಂಡನ್ ಬ್ರಿಚ್ ಬಳಿ ಪೊಲೀಸರು ಕರ್ತವ್ಯದಲ್ಲಿರುವುದನ್ನು ನೋಡಿ ವಿಜಯಕುಮಾರ ಅವರು ಇನ್ನಷ್ಟು ವೇಗವಾಗಿ ಲಾರಿ ಓಡಿಸಿದ್ದಾರೆ. ಪೊಲೀಸರು ಲಾರಿಗೆ ಅಡ್ಡಲಾಗಿ ಕೈ ಮಾಡಿದಾಗ ಅವರ ಮೇಲೆಯೇ ಲಾರಿ ಹಾಯಿಸಿ ಮುನ್ನುಗ್ಗುವ ಪ್ರಯತ್ನ ಮಾಡಿದ್ದಾರೆ.
ಈ ವೇಳೆ ಶೈಲೇಶ ನಾಯಕ ಅವರು ತಪ್ಪಿಸಿಕೊಂಡಿದ್ದು, ಅದಾದ ನಂತರ ವಿಜಯಕುಮಾರ ಪೊಲಚಂದ್ರ ಅವರು ರಸ್ತೆಗೆ ಅಡ್ಡಲಾಗಿ ಲಾರಿ ನಿಲ್ಲಿಸಿದ್ದಾರೆ. ಆ ಮೂಲಕ ಬೇರೆ ಲಾರಿಗಳ ಸಂಚಾರವನ್ನು ಅವರು ತಡೆದಿದ್ದಾರೆ. ಬೇರೆ ವಾಹನ ಸಂಚಾರಕ್ಕೆ ತೊಂದರೆ ಮಾಡದಂತೆ ಸೂಚಿಸಿದ ಪೊಲೀಸರ ಜೊತೆ ವಿಜಯಕುಮಾರ ಪೊಲಚಂದ್ರ ಅವರು ವಾಗ್ವಾದ ನಡೆಸಿದ್ದಾರೆ. `ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ಗಾಡಿ ತೆಗೆಯುವುದಿಲ್ಲ’ ಎಂದು ಜಗಳ ಮಾಡಿದ್ದಾರೆ. ಗಾಯಗೊಂಡಿದ್ದ ಶೈಲೇಶ ನಾಯಕ ಅವರು ಕೆಲಕಾಲ ವಿಶ್ರಾಂತಿಪಡೆದು ಲಾರಿ ಚಾಲಕನ ವಿರುದ್ಧ ಪೊಲೀಸ್ ದೂರು ನೀಡಿದ್ದಾರೆ.