`ಕ್ರೀಡಾ ಮನಸ್ಥಿತಿ ಇದ್ದವರಿಗೆ ಮಾತ್ರ ಅವಕಾಶ ಅರೆಸಿ ಬರುತ್ತದೆ’ ಎಂದು ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ಹೇಳಿದ್ದಾರೆ. `ಆಧುನಿಕತೆಯ ಸವಾಲುಗಳನ್ನು ಎದುರಿಸಲು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ’ ಎಂದು ಕರೆ ನೀಡಿದ್ದಾರೆ.
ಶುಕ್ರವಾರ ಸ್ಕೊಡ್‌ವೆಸ್ ಸಂಸ್ಥೆ ಸಿಬ್ಬಂದಿ ನಡುವೆ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟಕ್ಕೆ ಸಂದೀಪ್ ಸೂರ್ಯವಂಶಿ ಅವರು ಚಾಲನೆ ನೀಡಿದ್ದು, ಅದಾದ ನಂತರ ಅವರು ಸಹ ಕೆಲ ಕಾಲ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ಶಿರಸಿ: ಮಾನವ ಸಂಪನ್ಮೂಲದ ಸಾಮರ್ಥ್ಯ ಹೆಚ್ಚಿಸುವಲ್ಲಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹೆಚ್. ಸೂರ್ಯವಂಶಿ ಹೇಳಿದರು. `ಸೇವಾ ಕ್ಷೇತ್ರದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವ ಸ್ಕೊಡ್‌ವೆಸ್ ಸಂಸ್ಥೆ ಸಮಾಜದ ಆಸ್ತಿ’ ಎಂದವರು ಬಣ್ಣಿಸಿದರು. `ಆಧುನಿಕತೆಯ ಸವಾಲುಗಳನ್ನು ಎದುರಿಸಲು ಪ್ರತಿಯೊಬ್ಬರು ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ಜಾಗತಿಕ ಬದಲಾವಣೆಯ ಪೈಪೋಟಿಯನ್ನು ಎದುರಿಸಲು ಸದೃಢಗೊಳ್ಳುವ ವ್ಯಕ್ತಿಗಳಿಗೆ ಎಲ್ಲಾ ಅವಕಾಶಗಳು ಹುಡುಕಿಕೊಂಡು ಬರುತ್ತದೆ’ ಎಂದವರು ಹೇಳಿದರು.
ಕ್ರೀಡಾ ಜ್ಯೋತಿಯನ್ನು ಹಸ್ತಾಂತರಿಸಿದ ಶಿರಸಿ ಡಿವೈಎಸ್‌ಪಿ ಗೀತಾ ಪಾಟೀಲ್ ಅವರು `ಕ್ರೀಡೆ ಎನ್ನುವುದು ಪ್ರತಿಯೊಬ್ಬನ ಜೀವನದ ಅವಿಭಾಜ್ಯ ಅಂಗ. ಜೀವನದ ಪ್ರತಿ ಹಂತವೂ ಸ್ಪರ್ಧಾತ್ಮಕವಾಗಿಯೇ ಇರುವುದರಿಂದ ಪೈಪೋಟಿಯನ್ನು ಎದುರಿಸುವ ವ್ಯಕ್ತಿಗಳು ಮಾತ್ರ ಜೀವನದಲ್ಲಿ ಗೆಲ್ಲಲು ಸಾಧ್ಯ’ ಎಂದರು. `ಪ್ರತಿಯೊಬ್ಬರೂ ತಮ್ಮ ವ್ಯಕ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕ್ರೀಡಾ ಚಟುವಟಿಕೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು’ ಎಂದು ಕರೆ ನೀಡಿದರು. ಕ್ರೀಡಾಕೂಟದಲ್ಲಿ ಅರಣ್ಯ ಮಹಾವಿದ್ಯಾಲಯದ ಡೀನ್ ಆರ್ ವಾಸುದೇವರವರು ಕ್ರೀಡಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ ಎಸ್ ಭಟ್ಟ ಲೋಕೇಶ್ವರ, ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ, ಸಹಕಾರ್ಯದರ್ಶಿ ಕೆ ಎನ್ ಹೊಸಮನಿ, ಕಾರ್ಯಕಾರಿ ಸಮಿತಿ ಸದಸ್ಯ ದಯಾನಂದ ಅಗಾಸೆ ಮಾತನಾಡಿದರು. ಸ್ಕೊಡ್‌ವೆಸ್‌ನ ಉಪಾಧ್ಯಕ್ಷ ಕುಮಾರ್ ವಿ ಕೂರ್ಸೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಸ್ಕೊಡ್‌ವೆಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಸ್ಕೊಡ್‌ವೆಸ್‌ನ ಕಾರ್ಯಕ್ರಮಾಧಿಕಾರಿ ಡಾ. ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 200 ಕ್ಕೂ ಹೆಚ್ಚು ಸ್ಕೊಡ್‌ವೆಸ್‌ನ ಸಿಬ್ಬಂದಿ ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದರು.