ಶಿರಸಿಯ ಶ್ರೀಧರ ಭಟ್ಟ ಅವರ `ದೇವರು’ ಎಂಬ ಹೆಸರಿನ ಕಟ್ಟಡದಲ್ಲಿ ವಾನಳ್ಳಿಯ ಪ್ರಕಾಶ ಹೆಗಡೆ ಅವರು ಅನಧಿಕೃತ ಇಸ್ಪಿಟ್ ಕ್ಲಬ್ ನಡೆಸುತ್ತಿದ್ದು, ಡಿವೈಎಸ್ಪಿ ಗೀತಾ ಪಾಟೀಲ್ ಅವರು ಆ ಅಕ್ರಮ ಆಟವನ್ನು ಬಂದ್ ಮಾಡಿಸಿದ್ದಾರೆ. ಪೊಲೀಸರು ದಾಳಿ ಮಾಡಿದ ವೇಳೆ ಪ್ರಕಾಶ ಹೆಗಡೆ ಅವರು ಅಲ್ಲಿ ಸಿಕ್ಕಿ ಬಿದ್ದಿದ್ದು, ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು 20 ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಶಿರಸಿಯ ಹೊಸಪೇಟೆ ರಸ್ತೆಯಲ್ಲಿ ಶ್ರೀಧರ ಭಟ್ಟ ಅವರು ಕಟ್ಟಡವೊಂದನ್ನು ಹೊಂದಿದ್ದಾರೆ. ಆ ಕಟ್ಟಡಕ್ಕೆ ಅವರು `ದೇವರು’ ಎಂದು ಹೆಸರಿಟ್ಟಿದ್ದಾರೆ. ಆ ಕಟ್ಟಡದ ಕೋಣೆಯೊಂದನ್ನು ವಾನಳ್ಳಿಯ ಪ್ರಕಾಶ ಶ್ರೀಪಾದ ಹೆಗಡೆ ಅವರು ಪಡೆದಿದ್ದು, ಅಲ್ಲಿ ಅನಧಿಕೃತವಾಗಿ ಕ್ಲಬ್ ನಡೆಸುತ್ತಿದ್ದಾರೆ. ಈ ಕ್ಲಬ್ಬಿನಲ್ಲಿ ಬಿಸಲಕೊಪ್ಪದ ಶಂಕರ್ ರಾಮಚಂದ್ರ ನಾಯ್ಕ ಅವರು ಮ್ಯಾನೇಜರ್ ಆಗಿದ್ದಾರೆ. ಈ ಕ್ಲಬ್ಬಿನಲ್ಲಿ ಶ್ರದ್ಧಾನಂದಗಲ್ಲಿಯ ರಾಕೇಶ ಗಜಾನನ ಮಡಗಾಂವ್ಕರ್, ಕಸ್ತೂರಿಬಾ ನಗರದ ಸಯ್ಯದಪಯಾಜ್ ಸಯ್ಯದ ಅಬ್ದುಲ್ ರಹೀಮ್ ಹಾಗೂ ಶಿರಸಿ ಮಾರಿಗುಡಿ ರಸ್ತೆಯ ಭತ್ತದ ಓಣಿಯ ಪ್ರಶಾಂತ ಅನಂತ ಭತ್ತದ ಅವರು ಕೆಲಸ ಮಾಡಿಕೊಂಡಿದ್ದಾರೆ.
ಮಾರ್ಚ 22ರ ಸಂಜೆ 7.30ಕ್ಕೆ ಡಿವೈಎಸ್ಪಿ ಗೀತಾ ಪಾಟೀಲ್ ಅವರು ಆ ಕ್ಲಬ್ಬಿನ ಮೇಲೆ ದಾಳಿ ಮಾಡಿದ್ದಾರೆ. ಆಗ, ಅಲ್ಲಿ ಹಣದ ಬದಲು ವಿವಿಧ ಮುಖಬೆಲೆಯ ಟೋಕನ್ ನೀಡಿ ಇಸ್ಪಿಟ್ ಆಟ ಆಡಿಸುತ್ತಿರುವುದು ಗಮನಕ್ಕೆ ಬಂದಿದೆ. ನಿಲೇಕೇಣಿಯ ಕೃಷಿಕ ಗಣಪತಿ ಮಂಜುನಾಥ ಹೆಗಡೆ, ಸಾಗರ ಹೆಗ್ಗೋಡಿನ ತೋಟ ಕೆಲಸಗಾರ ರತ್ನಾಕರ ರಾಮಪ್ಪ ಹೆಗ್ಗರಗಿ, ಮರಾಠಿಕೊಪ್ಪ ಪುಟ್ಟನಮನೆಯ ಹೊಟೇಲ್ ಕಾರ್ಮಿಕ ಉಲ್ಲಾಸ ಗಣಪತಿ ಶೆಟ್ಟಿ, ಯಲ್ಲಾಪುರ ಉಮ್ಮಚ್ಗಿಯ ಕೃಷಿಕ ಪ್ರದೀಪ ದೇವು ಗೌಡ, ಸಿದ್ದಾಪುರ ಹೊಸಗದ್ದೆಯ ಕೃಷಿಕ ರವಿ ರಾಮಚಂದ್ರ ನಾಯ್ಕ, ಶಿರಸಿ ಬಾಶಿಯ ಕೃಷಿಕ ಪ್ರವೀಣ ಚನ್ನಬಸಪ್ಪ ಗೌಡ, ಶಿರಸಿ ದೋಬಿಹಂಡ ಬಳಿಯ ಮರಾಠಿಕೊಪ್ಪದ ನಿವೃತ್ತ ಪಿಗ್ಮಿ ಎಜೆಂಟ್ ಪ್ರಮೋದ ಗೋವಿಂದ ಕಾಮತ್ ಅವರು ಆಟದಲ್ಲಿ ತಲ್ಲೀನರಾಗಿದ್ದನ್ನು ಪೊಲೀಸರು ಗಮನಿಸಿದ್ದಾರೆ.
ಶಿರಸಿ ಅಶೋಕನಗರದ ವ್ಯವಹಾರಸ್ಥ ಸುರೇಶ ಅನಂತ ಬಂಕಾಪುರ, ಬೆಂಗಳೆ ಬನವಾಸಿ ರಸ್ತೆಯ ಕಾರ್ಪರೆಂಟರ್ ರವಿ ಚಂದ್ರಶೇಖರ ಮೇಸ್ತಾ, ಜಡ್ಡಿಗದ್ದೆಯ ಕೃಷಿಕ ವಿನಾಯಕ ಚಂದ್ರಶೇಖರ ನಾಯ್ಕ, ಸೊರಬ ಬಸ್ತಾರಪೇಟೆಯ ಕುಮಾರ ನಾಗಪ್ಪ ಜಡೆ, ಹೊನ್ನಾವರ ಕರ್ಕಿಯ ಸೆಂಟ್ರಿAಗ್ ಕಾರ್ಮಿಕ ಗಜಾನನ ನಾರಾಯಣ ನಾಯ್ಕ, ಶಿರಸಿ ಗಣೇಶನಗರ ಪುಟ್ಟನಮನೆಯ ಆದರ್ಶ ರಾಘವ ಭಟ್ಟ, ಗಣೇಶನಗರದ ಗುತ್ತಿಗೆದಾರ ರಮೇಶ ಗೋಪಾಲ ನಾಯ್ಕ, ಸೊರಬದ ನಂದೀಶ ಬಸವನಗೌಡ ತುಂಬ್ರಿಕೊಪ್ಪ ಅವರು ಸಹ ಅನಧಿಕೃತವಾಗಿ ಜೂಜಾಡುತ್ತಿರುವುದನ್ನು ಪೊಲೀಸರು ನೋಡಿದ್ದಾರೆ. ಈ ವೇಳೆ ಆ ಜೂಜಿನ ಮನೆಯಲ್ಲಿ ಪ್ರಕಾಶ ಹೆಗಡೆ ಅವರು ಹಾಜರಿದ್ದು, ಅವರು ನೇಮಿಸಿದ ಸಿಬ್ಬಂದಿ ಜೂಜಾಡಲು ಬಂದವರಿಗೆ ಸಕಲ ವ್ಯವಸ್ಥೆ ಮಾಡಿಕೊಟ್ಟಿದನ್ನು ಪೊಲೀಸರು ದಾಖಲೆಯಲ್ಲಿ ನಮೂದಿಸಿದ್ದಾರೆ.
ತಕ್ಷಣ ಪೊಲೀಸರು ಆ ಅಕ್ರಮ ಆಟಕ್ಕೆ ತಡೆ ಒಡ್ಡಿದ್ದಾರೆ. ಈ ವಿಷಯದ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಹಣದ ಬದಲು ಟೋಕನ್ ನೀಡಿ ಅದರ ಆಧಾರದಲ್ಲಿ ಜೂಜಾಟ ಆಡುತ್ತಿರುವ ಬಗ್ಗೆಯೂ ವಿವರಿಸಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಆ ಇಸ್ಪಿಟ್ ಕ್ಲಬ್ ಬಂದ್ ಮಾಡಿಸಿದ್ದಾರೆ.
`ಜೂಜಾಟ ಜೀವನಕ್ಕೆ ಮಾರಕ’