ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ 9 ಸೇತುವೆಗಳು ಶಿಥಿಲಗೊಂಡಿದೆ. ಸದ್ಯ ರಸ್ತೆ ಮರುಡಾಂಬರೀಕರಣ ನಡೆಯುತ್ತಿದ್ದರೂ ಸೇತುವೆಗೆ ಕಾಯಕಲ್ಪ ದೊರೆಯದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ.
ಅಣು ವಿದ್ಯುತ್ ಸ್ಥಾವರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯನ್ನು ಸರ್ಕಾರ ಅಭಿವೃದ್ಧಿ ಮಾಡುತ್ತಿದೆ. ಕಾರವಾರ-ಇಳಕಲ್ ರಾಜ್ಯ ಹೆದ್ದಾರಿಗೆ ಮರು ಡಾಂಬರೀಕರಣ ಭಾಗ್ಯ ದೊರೆತರೂ ಆ ಮಾರ್ಗದಲ್ಲಿರುವ ಶಿಥಿಲ ಸೇತುವೆಗಳ ಅಭಿವೃದ್ಧಿಗೆ ಯಾವ ಕ್ರಮವನ್ನು ಕೈಗೊಂಡಿಲ್ಲ. ಇಲ್ಲಿನ ಒಟ್ಟು 49 ಕಿಮಿ ದೂರದಲ್ಲಿ 20ಕ್ಕೂ ಅಧಿಕ ಸೇತುವೆಗಳಿದ್ದು, ಅವು 30ಕ್ಕೂ ಅಧಿಕ ವರ್ಷ ಹಳೆಯದಾಗಿವೆ. ಭಾರೀ ವಾಹನಗಳ ಓಡಾಟದ ಪರಿಣಾಮ ಆ ಸೇತುವೆಯ ಕಲ್ಲುಗಳು ಕಿತ್ತು ಹೋಗಿವೆ. ಭಾರೀ ಪ್ರಮಾಣದ ವಾಹನ ಓಡಾಡಿದರೆ ಸೇತುವೆ ನಡುಗುತ್ತದೆ. ಸೇತುವೆ ನಡುವೆ ಅಲ್ಲಲ್ಲಿ ಹೊಂಡ ಬಿದ್ದಿದ್ದು, ಯಾವದೇ ಒಂದು ಸೇತುವೆ ಕುಸಿದರೂ ಹತ್ತಾರು ಹಳ್ಳಿಗಳ ಸಂಚಾರಕ್ಕೆ ಸಮಸ್ಯೆ ಆಗಲಿದೆ. ಜೊತೆಗೆ ಕೈಗಾಕ್ಕೆ ಇಂಧನ ಪೂರೈಕೆಯೂ ಸ್ಥಗಿತವಾಗಲಿದೆ.
ಕಾರವಾರದಿಂದ ಕೈಗಾಕ್ಕೆ ಸದಾಶಿವಗಡ-ಕದ್ರಾ ಮೂಲಕ ಒಂದು ರಸ್ತೆ ಇದ್ದರೆ ಕಿನ್ನರ, ಕೆರವಡಿ-ಮಲ್ಲಾಪುರ ಮೂಲಕ ಎರಡನೇ ರಸ್ತೆ ಇದೆ. ಬಸ್, ಕಾರು ಮುಂತಾದ ವಾಹನಗಳು ಸದಾಶಿವಗಡ ಮೂಲಕ ಓಡಾಡುತ್ತವೆ. ಆದರೆ, ಕೈಗಾಕ್ಕೆ ತೆರಳುವ ಇಂಧನ, ಜನರೇಟರ್, ನಿರ್ಮಾಣ ಸಾಮಗ್ರಿಗಳು ಮುಂತಾದ ಭಾರಿ ವಾಹನಗಳು ಕೆರವಡಿ ಮಾರ್ಗವಾಗಿಯೇ ತೆರಳುತ್ತವೆ. ಕಾರವಾರ-ಸದಾಶಿವಗಡ-ಕದ್ರಾ ರಸ್ತೆಯಲ್ಲಿ ಕಾಳಿ ನದಿಗೆ ನಿರ್ಮಾಣವಾದ ಎರಡು ದೊಡ್ಡ ಸೇತುವೆಗಳು ಅಧಿಕ ಬಾರದ ವಾಹನ ತಡೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕೈಗಾದ ಭಾರಿ ವಾಹನಗಳಿಗೆ ಪರ್ಯಾಯ ರಸ್ತೆಯನ್ನು ಸೂಚಿಸಲಾಗಿದೆ. ಆದರೆ, ಈ ಹೆದ್ದಾರಿಯ ಸೇತುವೆಗಳೂ ಶಿಥಿಲವಾಗಿದ್ದು ಆತಂಕಕ್ಕೆ ಕಾರಣವಾಗಿದೆ.
ಸದ್ಯ ಕೈಗಾ ಐದು ಮತ್ತು 6 ನೇ ಘಟಕದ ನಿರ್ಮಾಣ ಕಾಮಗಾರಿ ನಡೆದೆ. ಅದಕ್ಕೆ ವಿವಿಧ ಸಾಮಗ್ರಿಗಳ ಪೂರೈಕೆಗೆ ಅಧಿಕ ಭಾರದ ವಾಹನಗಳ ಓಡಾಟ ನಿರಂತರವಾಗಿದೆ. ಜೊಯಿಡಾ-ರಾಮನಗರದಿಂದ ಜಲ್ಲಿ ಹಾಗೂ ಕಲ್ಲಿನ ಪುಡಿ ತುಂಬಿಕೊAಡು ಬರುವ ಟಿಪ್ಪರ್ಗಳು ಕದ್ರಾದಿಂದಲೇ ತೆರಳಲು ಅವಕಾಶವಿದ್ದರೂ ಅಲ್ಲಿ ಹೋಗದೇ-ಕಾರವಾರ-ಕೆರವಡಿ-ಮಲ್ಲಾಪುರ ಮಾರ್ಗವಾಗಿ ಸುಮಾರು 100 ಕಿಮೀ ಸುತ್ತಿ ಕೈಗಾ ತಲುಪುತ್ತಿವೆ.