ಕಬ್ಬಿಣದ ರಾಡು, ಸೊಟ್ಟೆಹಿಡಿದ ಆರು ಜನ ಕುಮಟಾದ ಬೀರಾ ಗೌಡ ಅವರ ಮನೆಗೆ ನುಗ್ಗಿ ದಾಂದಲೆ ಮಾಡಿದ್ದಾರೆ. ತಾವು ಹೇಳಿದಂತೆ ಕೇಳದಿದ್ದರೆ ಇಡೀ ಮನೆಯನ್ನು ನಾಶ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ.
ಕುಮಟಾ ಹೆಗಡೆ ಕಲಕೋಡದಲ್ಲಿ ಬೀರಾ ವಾಸು ಗೌಡ ಅವರು ವಾಸವಾಗಿದ್ದಾರೆ. ಅದೇ ಊರಿನ ಶ್ರೀಧರ ನಾರಾಯಣ ಗೌಡ, ಲಕ್ಷೀ ಶ್ರೀಧರ ಗೌಡ, ಮಾದೇವ ನಾಗು ಗೌಡ, ಪಾರ್ವತಿ ಮಾದೇವ ಗೌಡ, ಗಣಪತಿ ಮಹಾಬಲೇಶ್ವರ ಗೌಡ ಹಾಗೂ ಮಾದೇವಿ ಗೌಡ ಅವರು ಬೀರಾ ಗೌಡ ಅವರ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾರೆ. ಅವರೆಲ್ಲರ ಕೈಯಲ್ಲಿ ಕಬ್ಬಿಣದ ರಾಡು ಸೊಟ್ಟೆಯಿರುವುದನ್ನು ನೋಡಿ ಬೀರಾ ಗೌಡ ಅವರ ಪತ್ನಿ ಹಾಗೂ ಮಕ್ಕಳು ಬೆದರಿದ್ದಾರೆ.
ಬೀರಾ ಗೌಡ ಹಾಗೂ ಎದುರಾಳಿಗಳ ನಡುವೆ ಭೂ ವ್ಯಾಜ್ಯ ಪ್ರಕರಣವೊಂದು ನಡೆಯುತ್ತಿದೆ. ಈ ಕೇಸು ಕೋರ್ಟಿನಲ್ಲಿ ವಿಚಾರಣಾ ಹಂತದಲ್ಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹಿಂಪಡೆಯುವAತೆ ಆ ಆರು ಜನ ಬೀರಾ ಗೌಡ ಅವರ ಮನೆಗೆ ನುಗ್ಗಿ ಒತ್ತಾಯಿಸಿದ್ದಾರೆ. ಮಾರ್ಚ 13ರ ರಾತ್ರಿ ಅವರೆಲ್ಲರೂ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು, ಆ ವೇಳೆ ಬೀರಾ ಗೌಡ ಅವರು ಮನೆಯಲ್ಲಿಲ್ಲದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
`ಕೋರ್ಟಿನಲ್ಲಿದ್ದ ಕೇಸು ವಾಪಸ್‌ಪಡೆಯದಿದ್ದರೆ ಈ ಹಿಂದೆ ಕಪೌಂಡ್ ನಾಶ ಮಾಡಿದ ಹಾಗೇ ನಿಮ್ಮ ಮನೆಯನ್ನು ನಾಶ ಮಾಡುತ್ತೇವೆ’ ಎಂದು ಅವರೆಲ್ಲರೂ ಬೆದರಿಸಿದ್ದಾರೆ. ಮನೆಗೆ ಬಂದ ನಂತರ ಈ ವಿಷಯ ಅರಿತ ಬೀರಾ ಗೌಡ ಅವರು ತಮಗೆ ಬೆದರಿಕೆ ಬಂದಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಕುಮಟಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದಾರೆ.