ಅಂಕೋಲಾ – ಕುಮಟಾ ಮಾರ್ಗವಾಗಿ ಸಂಚರಿಸುತ್ತಿದ್ದ ಪೊಲೀಸ್ ಜೀಪು ಪಲ್ಟಿಯಾಗಿದೆ. ಪೊಲೀಸ್ ಜೀಪಿನ ಸಮೀಪ ಮಂಗ ಹಾರಾಟ ನಡೆಸಿರುವುದೇ ಈ ಅಪಘಾತಕ್ಕೆ ಮುಖ್ಯ ಕಾರಣ!
Advertisement. Scroll to continue reading.
ಕಾರವಾರದ ಪೊಲೀಸ್ ಸಿಬ್ಬಂದಿ ಸುನೀಲ ಪವಾರ್ ಅವರು ಸರ್ಕಾರಿ ಜೀಪನ್ನು ದುರಸ್ಥಿಗೆ ಬಿಟ್ಟಿದ್ದರು. ಅಂಕೋಲಾದ ಶಿವಾನಂದ ಸರ್ವೀಸ್ ಸೆಂಟರಿನಲ್ಲಿ ಜೀಪು ದುರಸ್ಥಿ ಆಗಿದ್ದು, ಮಾರ್ಚ 11ರಂದು ಅದರ ತಪಾಸಣೆ ನಡೆಸಿದ್ದರು. ಆ ದಿನ ಜೀಪು ಓಡಿಸಿಕೊಂಡು ಅವರು ಕುಮಟಾ ಕಡೆ ಹೊರಟಿದ್ದರು. ಹಿಚ್ಕಡ ಕ್ರಾಸಿನ ಬಳಿ ಏಕಾಏಕಿ ಮಂಗಗಳ ಗುಂಪು ರಸ್ತೆಗೆ ಅಡ್ಡಲಾಗಿ ಸಂಚರಿಸಿದ್ದು, ಇದನ್ನು ನೋಡಿದ ಸುನೀಲ ಪವಾರ್ ಅವರು ಬೆದರಿದರು. ಒಮ್ಮೇಲೆ ಜೀಪಿನ ಬ್ರೆಕ್ ಅದುಮಿದರು.
ವೇಗವಾಗಿ ಸಂಚರಿಸುತ್ತಿದ್ದ ಸರ್ಕಾರಿ ಜೀಪು ಏಕಾಏಕಿ ನಿಂತಿದ್ದು, ಅಲ್ಲಿಯೇ ಪಲ್ಟಿಯಾಯಿತು. ರಸ್ತೆಗೆ ಅಡ್ಡಲಾಗಿ ಬಂದ ಮಂಗನನ್ನು ತಪ್ಪಿಸಲು ಹೋಗಿ ಜೀಪ್ ಪಲ್ಟಿಯಾದ ಬಗ್ಗೆ ಸುನೀಲ ಪವಾರ್ ಅವರು ಮೇಲಧಿಕಾರಿಗಳಿಗೆ ವಿವರಿಸಿದರು. ಈ ಅಪಘಾತದಲ್ಲಿ ಸುನೀಲ ಪವಾರ್ ಅವರ ಕೈಗೂ ಗಾಯವಾಗಿದ್ದು, ಅವರು ಚಿಕಿತ್ಸೆಪಡೆದರು. ಸರ್ಕಾರಿ ಜೀಪು ಅಪಘಾತಪಡಿಸಿದ ಸುನೀಲ ಪವಾರ್ ಅವರ ವಿರುದ್ಧ ಪೊಲೀಸ ಕಂಟ್ರೋಲ್ ರೂಮಿನ ಪೊಲೀಸ್ ನಿರೀಕ್ಷಕ ಸತೀಶಕುಮಾರ ಕೆವಿ ಅವರು ಕಾನೂನು ಕ್ರಮಕ್ಕೆ ಮುಂದಾದರು. ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಚಾಲಕನ ವಿರುದ್ಧ ಅವರು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದರು.
`ನಿಧಾನವಾಗಿ ವಾಹನ ಓಡಿಸಿ. ಸಂಚಾರಿ ನಿಯಮ ಪಾಲಿಸಿ’