ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಪ್ರಯತ್ನ, ಜಾಲತಾಣದಲ್ಲಿ ಮಹಿಳೆಯರ ಅಶ್ಲೀಲ ಫೋಟೊ ರವಾನೆ, ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ, ಮೋಸ ಹಾಗೂ ವಂಚನೆ ಸೇರಿ ಹಲವು ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದ ಅರ್ಜುನ ಗೌಡ (ಅರುಣ) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕಾಡಿನಲ್ಲಿ ಅವಿತಿದ್ದ ಅರ್ಜುನ ಗೌಡ ಅವರನ್ನು ಪೊಲೀಸರು ಸುತ್ತುವರೆದು ವಶಕ್ಕೆಪಡೆದಿದ್ದಾರೆ.
ಶಿರಸಿ ಮಲಳಿಯ ಅರ್ಜುನ ಗೌಡ ಅವರು ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ಬಹುತೇಕ ಆರೋಪಗಳು ಗಂಭೀರ ಸ್ವರೂಪದಾಗಿದ್ದು, 2024ರಿಂದಲೂ ಅರ್ಜುನ ಗೌಡ ಅವರು ತಲೆಮರೆಸಿಕೊಂಡಿದ್ದರು. ಕಾಡಿನಲ್ಲಿ ವಾಸವಾಗಿದ್ದ ಅರ್ಜುನ ಗೌಡ ಅವರು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ನಂತರ ಮತ್ತೆ ದಟ್ಟ ಅರಣ್ಯ ಸೇರುತ್ತಿದ್ದರು. ಹೀಗಾಗಿ ಪೊಲೀಸರಿಗೆ ಸಹ ಅರ್ಜುನ ಗೌಡರನ್ನು ಸೆದೆಬಡಿಯುವುದು ಸವಾಲಾಗಿತ್ತು.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅರ್ಜುನ ಗೌಡ ಅವರು ಆರೋಪಿಯಾಗಿದ್ದರು. ಅಸಹ್ಯಕರ ಫೋಟೋಗಳನ್ನು ಅವರು ಜಾಲತಾಣದಲ್ಲಿ ಹರಿಬಿಟ್ಟು ಮಹಿಳೆಯರಿಗೆ ಅವಮಾನ ಮಾಡಿದ್ದರು. ಹಣಕಾಸು ವಂಚನೆ, ನಂಬಿಕೆ ದ್ರೋಹದ ಜೊತೆ ಸರ್ಕಾರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಗಳು ಅವರ ಮೇಲಿದ್ದವು. ಶಿರಸಿ ಗ್ರಾಮೀಣ, ಬನವಾಸಿ ಹಾಗೂ ಕುಂದಾಪುರ ಪೊಲೀಸ್ ಠಾಣೆಯವರು ಅರ್ಜುನ ಗೌಡ ಅವರ ಹುಡುಕಾಟದಲ್ಲಿದ್ದು, ವಾರೆಂಟ್ ಆದರೂ ಸಿಕ್ಕಿ ಬಿದ್ದಿರಲಿಲ್ಲ. ಈ ಹಿನ್ನಲೆ ನ್ಯಾಯಾಲಯ ಸೆಮೆನ್ಸ್ ಜಾರಿ ಮಾಡಿತ್ತು.
ದಟ್ಟ ಅರಣ್ಯದಲ್ಲಿ ಅರ್ಜುನ ಗೌಡ ಅಡಗಿರುವ ಬಗ್ಗೆ ಈ ದಿನ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸರು ಆ ಕಾಡು ಸುತ್ತುವರೆದರು. ಅರ್ಜುನ ಗೌಡ ಸಮೀಪಿಸಿದಾಗ ಆರೋಪಿ ಪೊಲೀಸರ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿದರು. ಅದಾಗಿಯೂ, ಆರೋಪಿ ಅರ್ಜುನ ಗೌಡ ತಪ್ಪಿಸಿಕೊಳ್ಳದ ಹಾಗೇ ಸುತ್ತುವರೆದ ಪೊಲೀಸರು ಸಾಹಸದಿಂದ ಬಂಧಿಸಿದರು. ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ ಅವರ ಸೂಚನೆ ಮೇರೆಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸ್ ನಿರೀಕ್ಷಕರಾದ ರಮೇಶ ಹೂಗಾರ್ ಈ ಕಾರ್ಯಾಚರಣೆ ನಡೆಸಿದ್ದರು.
ಪಿಸೈ ಸಂತೋಷ ಕುಮಾರ್ ಹಾಗೂ ಅಶೋಕಕುಮಾರ ರಾಥೋಡ್ ಅವರ ಜೊತೆ ಪೊಲೀಸ್ ಸಿಬ್ಬಂದಿ ಪ್ರಕಾಶ ತಳವಾರ್, ಗಣಪತಿ ನಾಯ್ಕ್, ವಿಘ್ನೇಶ್ವರ ಹೆಗಡೆ ಸೇರಿ ಅರ್ಜುನ ಗೌಡ ಅವರನ್ನು ಜೈಲಿಗೆ ಕಳುಹಿಸಿದರು. ಸದ್ಯ ಆರೋಪಿ ಅರ್ಜುನ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾರೆ.