ಯಲ್ಲಾಪುರದ ರವೀಂದ್ರ ನಗರದಲ್ಲಿನ ಮನೆ ಮನೆಯಲ್ಲಿಯೂ ಭಾರತ ಮಾತೆಯ ಆರಾಧನೆ ನಡೆಯುತ್ತಿದೆ. ಯುಗಾದಿ ಉತ್ಸವದ ಅಂಗವಾಗಿ ಸೋಮಣ್ಣ ಗೆಳೆಯರ ಬಳಗದವರು ಆ ಭಾಗದ ಎಲ್ಲಾ ಮನೆಯವರಿಗೂ ಭಾರತ ಮಾತೆಯ ಭಾವಚಿತ್ರ ವಿತರಿಸುವ ಸಂಕಲ್ಪ ಮಾಡಿದ್ದಾರೆ.
`ಪ್ರತಿ ನಿತ್ಯವೂ ಪ್ರತಿಯೊಬ್ಬರು ಭಾರತ ಮಾತೆಯನ್ನು ಸ್ಮರಿಸಬೇಕು’ ಎಂಬ ನಿಟ್ಟಿನಲ್ಲಿ ಆ ಭಾಗದ 300ಕ್ಕೂ ಅಧಿಕ ಮನೆಗಳಿಗೆ ಗೆಳೆಯರ ಬಳಗದವರು ಭಾರತ ಮಾತೆಯ ಭಾವಚಿತ್ರ ವಿತರಿಸುತ್ತಿದ್ದಾರೆ. ನಾಗೇಂದ್ರ ಭಟ್, ಕುಮುದ ಶೇಣೆ, ರಾಧಾ ಮರಾಠೆ, ಆನಂದ ಜಿ. ಅತ್ತಾರರ್ವಾಲ, ರಾಜು ಬುದ್ದಿ, ಬಾಬು ದೇಸಾಯಿ, ನರೇಶ್ ಯಾಮಕೆ, ಗಿರೀಶ್ ಭೋವಿ ವಡ್ಡರ್, ಸೋಮೇಶ್ವರ ನಾಯ್ಕ ಅವರು ಸೇರಿ ದೇಶಭಕ್ತಿ ಜಾಗೃತಿಗೊಳಿಸುವ ಕಾಯಕ ಶುರು ಮಾಡಿದ್ದಾರೆ. ರವೀಂದ್ರ ನಗರದ ಸಭಾಭವನದಲ್ಲಿ ಯುಗಾದಿ ಉತ್ಸವದ ನಿಮಿತ್ತ ಭಾರತ ಮಾತಾ ಭಾವಚಿತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಎಲ್ಲರಿಗೂ ಭಾವಚಿತ್ರ ತಲುಪಿಸುವ ಕಾರ್ಯ ಶುರುವಾಗಿದೆ.
ಪಟ್ಟಣ ಪಂಚಾಯತ ವ್ಯಾಪ್ತಿಯ ರವೀಂದ್ರನಗರದ 17 ಮತ್ತು 18ನೇ ವಾರ್ಡುಗಳಲ್ಲಿ ಗೆಳೆಯರ ಬಳಗದವರು ಮನೆ ಮನೆಗೆ ತೆರಳಿ ದೇಶಭಕ್ತಿಯ ಪ್ರಾಮುಖ್ಯತೆ ಬಗ್ಗೆ ವಿವರಿಸುತ್ತಿದ್ದಾರೆ. ಉದ್ಯಮಿ ಬಾಲಕೃಷ್ಣ ನಾಯಕ್ ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ್ ಹೆಗಡೆ ಅವರು ಮನೆ ಮನೆಗೆ ಭಾರತ ಮಾತೆಯ ಭಾವಚಿತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಈ ವೇಳೆ ಚಂದ್ರು ಕಟ್ಟಿಮನಿ ಅವರು ದೇಶಭಕ್ತಿ ಗೀತೆ ಹಾಡುವ ಮೂಲಕ ಗಮನಸೆಳೆದಿದ್ದಾರೆ.