ಕಳ್ಳತನ, ಜೀವ ಬೆದರಿಕೆ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬನವಾಸಿ ಬದನಗೋಡಿನ ಸುನಿಲ ಬೋವಿವಡ್ಡರ್ (ಸ್ವಾಮೇಲಾ) ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಕಾರಣಕ್ಕೆ ಆರು ತಿಂಗಳ ಕಾಲ ನ ಸುನಿಲ ಬೋವಿವಡ್ಡರ್ ಅವರಿಗೆ ಉತ್ತರ ಕನ್ನಡ ಜಿಲ್ಲಾ ಪ್ರವೇಶವನ್ನು ನಿಷೇಧಿಸಲಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿ ಅಲ್ಲಿಯೇ ವಾಸಿಸಲು ಅವಕಾಶ ಮಾಡಿಕೊಡಲಾಗಿದೆ.
ಸುನಿಲ್ ಬೋವಿವಡ್ಡರ್ ಅವರ ವಿರುದ್ಧ ಬನವಾಸಿ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳಿವೆ. ಅದರೊಂದಿಗೆ ಇನ್ನೂ ಐದು ವಿವಿಧ ದೂರು ದಾಖಲಾಗಿದೆ. ಈ ಹಿನ್ನಲೆ ಸುನೀಲ್ ಬೋವಿವಡ್ಡರ್ ವಿರುದ್ಧ ರೌಡಿಶೀಟರ್ ಪಟ್ಟಿ ತೆಗೆಯಲಾಗಿದ್ದು, ಅವರ ಚಲನ-ವಲನದ ಮೇಲೆ ಪೊಲೀಸರು ನಿಗಾವಹಿಸಿದ್ದರು. ಅದಾಗಿಯೂ ರೌಡಿ ಚಟುವಟಿಕೆ ಮುಂದುವರೆಸಿದ ಕಾರಣ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಗಡಿಪಾರು ಪ್ರಸ್ತಾವನೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್ ಜಿ ಅವರು ಮಾರ್ಚ್ 16ರಂದು ಗಡಿಪಾರು ಆದೇಶ ಹೊರಡಿಸಿದ್ದಾರೆ. `ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಸುನಿಲ ಬೋವಿವಡ್ಡರ್ ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕುತ್ತಿದ್ದು, ಆ ನಡವಳಿಕೆಯಿಂದ ಜನ ಭಯಭೀತರಾಗಿದ್ದಾರೆ. ಸಾಕ್ಷಿ ಹೇಳಲು ಸಹ ಹಿಂಜರಿಯುತ್ತಿದ್ದಾರೆ. ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಈತನನ್ನು ಜಿಲ್ಲೆಯಿಂದ ಹೊರಹಾಕುವುದು ಅಗತ್ಯ’ ಎಂದು ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಅದರ ಪ್ರಕಾರ, ಮುಂದಿನ 6 ತಿಂಗಳ ಕಾಲ ಸುನೀಲ ಬೋವಿವಡ್ಡರ್ ಅವರು ಉತ್ತರ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವ ಹಾಗಿಲ್ಲ.