ಕುಮಟಾದ ಊರಕೇರಿಯಲ್ಲಿ ರಾಜಾರೋಷವಾಗಿ ಕುಟು ಕುಟಿ ಆಟ ನಡೆದಿದೆ. ಸೂರ್ಯ, ಚಂದ್ರ, ಕಳಾವರ ಸೇರಿ ವಿವಿಧ ಪಟ ಹರಡಿಕೊಂಡಿದ್ದವರ ವಿರುದ್ಧ ಅಲ್ಲಿನವರೇ ಪೊಲೀಸರಿಗೆ ಫೋನ್ ಮಾಡಿದ್ದಾರೆ.
ಕುಮಟಾದ ಊರಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡುವು ಹತ್ತಿರ ಹೊನ್ನಾವರದ ಮಾಡಗೇರಿಯ ಗುರುಪ್ರಸಾದ ವಾಸುದೇವ ನಾಯ್ಕ (30) ಅವರು ಜೂಜಾಟ ನಡೆಸಿದ್ದಾರೆ. ಗುರುಪ್ರಸಾದ ನಾಯ್ಕ ಅವರ ಜೊತೆ ಕುಮಟಾ ತಲಗೋಡದ ಪರಮೇಶ್ವರ ಮಾದೇವ ಪಟಗಾರ (45), ಹೊನ್ನಾವರ ಕಡತೋಕದ ಮಂಜುನಾಥ ದ್ಯಾವಾ ಮುಕ್ರಿ (40), ಹೊನ್ನಾವರದ ಸಂತೋಷ ಮಂಜುನಾಥ ಕೋಡಿಯಾ (24), ಕುಮಟಾ ಊರಕೇರಿಯ ಪ್ರದೀಪ ಕೃಷ್ಣ ಪಟಗಾರ (37), ಕುಮಟಾದ ನಾಗರಾಜ ಪರಮೇಶ್ವರ ಪಟಗಾರ (42) ಹಾಗೂ ಹೊನ್ನಾವರ ಗೇರುಸೊಪ್ಪಾದ ಉಮೇಶ ರಾಮನಾಥ ನಾಯ್ಕ (55) ಈ ಆಟದ ರೂವಾರಿಯಾಗಿದ್ದಾರೆ.
ಮಾರ್ಚ 1ರಂದು ಅವರೆಲ್ಲರೂ ಸೇರಿ ಕುಟು ಕುಟಿ ಆಡಿಸುತ್ತಿರುವಾಗ ಕುಮಟಾ ಠಾಣೆಯ ಪೋಲಿಸ್ ನಿರೀಕ್ಷಕ ಯೊಗೇಶ ಕೆ ಎಂ ಅವರು ಅಲ್ಲಿ ದಾಳಿ ಮಾಡಿದ್ದಾರೆ. ತಮ್ಮ ಸಿಬ್ಬಂದಿ ಜೊತೆ ಹೋದ ಪಿಐ ಅವರಿಗೆ ಆ ಏಳು ಜನ ಶರಣಾಗಿದ್ದಾರೆ. ಅವರ ಬಳಿಯಿದ್ದ 2070ರೂ ಹಣವನ್ನು ಪೊಲೀಸರು ಜಪ್ತು ಮಾಡಿದ್ದು, ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಿದ್ದಾರೆ. ಆಟದ ಸಲಕರಣೆಗಳನ್ನು ವಶಕ್ಕೆಪಡೆದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.