ಕುಮಟಾದ ಬೆಟ್ಕುಳಿಯ ಶ್ರೀ ಓಂ ಶಕ್ತಿ ಯುವಕ ಸಂಘದವರು ನಡೆಸುವ ‘ಕಡಲ ಉತ್ಸವ’ ಮಾರ್ಚ 5 ಹಾಗೂ 6ರಂದು ನಡೆಯಲಿದೆ. 25ನೇ ವರ್ಷದ ಉತ್ಸವದ ಅಂಗವಾಗಿ ಬೆಳ್ಳಿ ಮಹೋತ್ಸವ ಆಚರಣೆಗೆ ಅದ್ಧೂರಿ ಸಿದ್ಧತೆ ನಡೆಯುತ್ತಿದೆ.
ಎರಡು ದಿನಗಳ ಕಾಲ ನಡೆಯಲಿರುವ ಈ ಮಹೋತ್ಸವದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಚಲನಚಿತ್ರ ಹಿನ್ನೆಲೆ ಗಾಯಕಿ ಎದೆತುಂಬಿ ಹಾಡುವೆನು ಕಾರ್ಯಕ್ರಮದ ನಾಧೀರಾ ಬಾನು, ಗಾಯಕ ರಾಖೇಶ ದಿಲ್ಸೆ, ಗಾಯಕಿ ಶ್ರೀಜಲ್ ಪೂಜಾರಿ ಸೇರಿದಂತೆ ಸ್ಥಳೀಯ ಕಲಾವಿದರು ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲಿದ್ದಾರೆ.
ಕುಮಟಾ ತಾಲೂಕಿನ ಬೆಟ್ಕುಳಿಯ ಶ್ರೀ ಓಂ ಶಕ್ತಿ ಮೈದಾನದಲ್ಲಿ ನಡೆಯಲಿರುವ ಈ ಉತ್ಸವವು ಸ್ಥಳೀಯ ಜನತೆಗೆ ಮಾತ್ರವಲ್ಲದೆ ಸಮೀಪದ ಗ್ರಾಮಗಳ ಜನರಿಗೂ ಆಕರ್ಷಣೆಯ ಕೇಂದ್ರವಾಗಲಿದೆ. ಸಮುದ್ರ ತೀರದ ನೈಸರ್ಗಿಕ ಸೌಂದರ್ಯದ ನಡುವೆ ನಡೆಯುವ ಈ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದ ಜನಸಮೂಹ ಸೇರುವ ನಿರೀಕ್ಷೆ ಇದೆ.
ಉದ್ಘಾಟನಾ ಸಮಾರಂಭ
ಮಾರ್ಚ್ 5ರಂದು ರಾತ್ರಿ ನಡೆಯುವ ಉದ್ಘಾಟನಾ ಸಮಾರಂಭವನ್ನು ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ ಉದ್ಘಾಟಿಸಲಿದ್ದು, ಬೆಟ್ಕುಳಿ ಗ್ರಾ.ಪಂ ನಿಕಟ ಪೂರ್ವ ಅಧ್ಯಕ್ಷ ಸಂತೋಷ್ ವಿ ಹರಿಕಾಂತ, ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಮಟಾ ವಿಧಾನಸಭಾ ಶಾಸಕ ದಿನಕರ ಶೆಟ್ಟಿ, ಉತ್ತರ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ತೊರ್ಕೆ ಗ್ರಾ ಪಂ ನಿಕಟ ಪೂರ್ವ ಅಧ್ಯಕ್ಷ ಆನಂದ ಕವರಿ, ಹರಿಕಾಂತ ಸಮಾಜದ ಅಧ್ಯಕ್ಷ ಲಕ್ಷ್ಮಣ ಹನುಮಂತ ಹರಿಕಾಂತ, ಪತ್ರಕರ್ತರ ಸಂಘದ ಜಿಲ್ಲಾ ಸದಸ್ಯ ಅರುಣ ಶೆಟ್ಟಿ, ಉದ್ಯಮಿ ಶೇಖರ ಹರಿಕಂತ್ರ, ಶಿವರಾಮ ಹರಿಕಾಂತ, ಆನಂದು ಹರಿಕಂತ, ದಾಮೋಧರ ಮೂಡಂಗಿ, ಹಾಗೂ ಸಂಘದ ಅಧ್ಯಕ್ಷ ಮಾರುತಿ ಹರಿಕಾಂತ, ಉಪಾಧ್ಯಕ್ಷ ಕಮಲಾಕರ ವಿ ಹರಿಕಾಂತ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ ಗುರೂಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ರಾಜ್ಯದ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ, ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಉತ್ತರ ಕನ್ನಡ ಜಿಲ್ಲಾ ಮಿನುಗರ ಫೆಡರೇಶನ್ ಸದಸ್ಯ ಮಹೇಶ್ ಮೂಡಂಗಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ನಾಯಕ್ ಮೊಗಟ, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ, ಉದ್ಯಮೆದಾರ ಮಂಜುನಾಥ ನಾಯ್ಕ, ಸುಧಾಕರ ತಾಂಡೇಲ, ಉತ್ತರ ಕನ್ನಡ ಗ್ರಾಮವಕ್ಕಲ ಯುವ ಬಳಗದ ಅಧ್ಯಕ್ಷ ವಿನಾಯಕ ಪಟಗಾರ, ಮುರುಡೇಶ್ವರ ನೇತ್ರಾಣಿ ಅಡ್ವೆಂಚರ್ ಮಾಲಕ ಗಣೇಶ್ ನೇತ್ರಾಣಿ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಶ್ರೀ ಓಂ ಶಕ್ತಿ ಯುವಕ ಸಂಘವು ಕಳೆದ 25 ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಈ ವರ್ಷ ಬೆಳ್ಳಿ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದೆ. ಈ ಅಂಗವಾಗಿ ಕಡಲ ಉತ್ಸವವನ್ನು ವಿಶೇಷ ರೀತಿಯಲ್ಲಿ ರೂಪಿಸಲಾಗಿದೆ. ಸಂಘದ ಕಾರ್ಯಕರ್ತರು ಕಾರ್ಯಕ್ರಮದ ಯಶಸ್ಸಿಗಾಗಿ ಹಲವು ದಿನಗಳಿಂದ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.
ಉತ್ಸವದ ಅಂಗವಾಗಿ ಮೈದಾನದಲ್ಲಿ ವಿಶೇಷ ಅಲಂಕಾರ, ಬೆಳಕು ಅಲಂಕಾರ, ವೇದಿಕೆ ವಿನ್ಯಾಸ ಹಾಗೂ ಸಾರ್ವಜನಿಕರಿಗಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನೂ ಸಮರ್ಪಕವಾಗಿ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.