ಸಿದ್ದಾಪುರದ ಚೂರಿಕಟ್ಟಾ ಭೂತಪ್ಪನಕಟ್ಟೆಯ ಬಳಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಅಕ್ರಮ ಜಾನುವಾರು ಸಾಗಾಟಗಾರರು ಕಾಣಿಸಿಕೊಂಡಿದ್ದಾರೆ. ಟಾಟಾ ಏಸ್ ವಾಹನದಲ್ಲಿ ದನ ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ತಡೆದಿದ್ದು, ಆರೋಪಿತರು ಓಡಿ ಪರಾರಿಯಾಗಿದ್ದಾರೆ.
ಸಿದ್ದಾಪುರ ಪಿಸೈ ಶಾಂತಿನಾಥ ಕೆ ಪಾಸಾನೆ ಅವರು ಗಸ್ತಿನಲ್ಲಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಕ್ರೀಮ್ ಬಣ್ಣದ ಟಾಟಾ ಏಸ್ ವಾಹನವೊಂದು ಸಿದ್ದಾಪುರ ಮಾರ್ಗವಾಗಿ ಸೊರಬದ ಕಡೆಗೆ ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಗಮನಿಸಿದ ಪೊಲೀಸರು, ಚೂರಿಕಟ್ಟಾ ಭೂತಪ್ಪನಕಟ್ಟೆಯ ಹತ್ತಿರ ವಾಹನವನ್ನು ತಡೆದಿದ್ದಾರೆ. ಈ ವೇಳೆ ವಾಹನದ ಚಾಲಕ ಮತ್ತು ಅದರಲ್ಲಿದ್ದ ಇತರ ವ್ಯಕ್ತಿಗಳು ಪೊಲೀಸರನ್ನು ಕಂಡು ವಾಹನವನ್ನು ಬಿಟ್ಟು ಸ್ಥಳದಿಂದ ಓಡಿ ಪರಾರಿಯಾಗಿದ್ದಾರೆ.
ಪೊಲೀಸರು ಆ ವಾಹನವನ್ನು ಪರಿಶೀಲಿಸಿದಾಗ, ಯಾವುದೇ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವುದು ಕಂಡುಬAದಿದೆ. ವಾಹನದಲ್ಲಿ ಸುಮಾರು 5 ಸಾವಿರ ರೂಪಾಯಿ ಬೆಲೆಯ ಒಂದು ಕಂದು ಬಣ್ಣದ ಹೋರಿ, 5 ಸಾವಿರ ರೂಪಾಯಿ ಬೆಲೆಯ ಒಂದು ಕಪ್ಪು ಬಣ್ಣದ ಹೋರಿ ಹಾಗೂ 3 ಸಾವಿರ ರೂಪಾಯಿ ಬೆಲೆಯ ಒಂದು ಕಪ್ಪು ಬಣ್ಣದ ಕೋಣವನ್ನು ವಧೆ ಮಾಡುವ ಉದ್ದೇಶದಿಂದ ಸಾಗಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಜಾನುವಾರುಗಳಿಗೆ ಆಹಾರ, ನೀರು ಅಥವಾ ಮೇವು ನೀಡದೆ ಅತ್ಯಂತ ಹಿಂಸಾತ್ಮಕ ರೀತಿಯಲ್ಲಿ ಹಗ್ಗದಿಂದ ಕಟ್ಟಿ ಹಾಕಿದನ್ನು ನೋಡಿ ಪೊಲೀಸರು ಮರುಕವ್ಯಕ್ತಪಡಿಸಿದ್ದಾರೆ.