ಯಲ್ಲಾಪುರದ ಜೋಡುಕೆರೆಯಲ್ಲಿ ಕಾಣಿಸಿಕೊಂಡಿದ್ದ ಮೊಸಳೆ ಸದ್ಯ ರಾತ್ರಿ ವೇಳೆ ಹೆದ್ದಾರಿಗೆ ಬರುತ್ತಿದೆ. ಹುಬ್ಬಳ್ಳಿ-ಅಂಕೋಲಾ ಹೆದ್ದಾರಿ ಅಂಚಿನಲ್ಲಿ ಮೊಸಳೆ ನೋಡಿದ ಜನ ಅದರ ವಿಡಿಯೋ ಮಾಡಿದ್ದಾರೆ.
ಯಲ್ಲಾಪುರ ಜಾತ್ರೆಗೂ ಮೊದಲು ಜೋಡಕೆರೆಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಆ ಮೊಸಳೆಯನ್ನು ಹಿಡಿದು ದಾಂಡೇಲಿಗೆ ಸಾಗಿಸುವ ಪ್ರಯತ್ನ ನಡೆದಿತ್ತು. ಅರಣ್ಯ ಇಲಾಖೆಯವರು ಪಂಚರವಿರಿಸಿದ್ದರೂ ಅದರಲ್ಲಿ ಮೊಸಳೆ ಬಿದ್ದಿರಲಿಲ್ಲ. ಕೆಲ ದಿನದ ನಂತರ ಆ ಮೊಸಳೆ ಅಲ್ಲಿ ಯಾರಿಗೂ ಕಾಣಿಸಿರಲಿಲ್ಲ. ಈಚೆಗೆ ಜೋಡುಕೆರೆಯಲ್ಲಿ ಅಪರಿಚಿತ ಶವವೊಂದು ಸಿಕ್ಕಿದ್ದು, ಆ ಶವಕ್ಕೆ ಸಹ ಮೊಸಳೆ ಘಾಸಿ ಮಾಡಿರಲಿಲ್ಲ. ಹೀಗಾಗಿ ಆ ಮೊಸಳೆ ಅಲ್ಲಿಂದ ಬೇರೆ ಕಡೆ ತೆರಳಿರಬಹುದು ಎಂದು ಜನ ಭಾವಿಸಿದ್ದರು. ಜೋಡುಕೆರೆಯ ಬಳಿ ಎಂದಿನoತೆ ದಿನ ನಿತ್ಯದ ಚಟುವಟಿಕೆಗಳು ಮುಂದುವರೆದಿದ್ದವು.
ಅದಾಗಿಯೂ, ಮುನ್ನಚ್ಚರಿಕೆ ಕ್ರಮವಾಗಿ ಜೋಡುಕೆರೆಯಲ್ಲಿ ಮೊಸಳಗೆ ಆಗಮಿಸಿದ ನಾಮಫಲಕ ಅಳವಡಿಸಿದ್ದು ಅದು ಹಾಗೇ ಇದೆ. ಈ ಎಲ್ಲದರ ನಡುವೆ ಮೊನ್ನೆ ರಾತ್ರಿ ಅಲ್ಲಿ ಮತ್ತೆ ಮೊಸಳೆ ಕಾಣಿಸಿಕೊಂಡಿದೆ. ಈ ಬಾರಿ ಹೆದ್ದಾರಿ ಅಂಚಿನವರೆಗೂ ಮೊಸಳೆ ಬಂದಿದ್ದು, ಜನರ ಓಡಾಟ ನೋಡಿ ತಕ್ಷಣ ಕೆರೆಗೆ ಧುಮುಕಿದೆ. ನದಿ ಜೋಡಣೆಯೇ ಇಲ್ಲದ ಕೆರೆಗೆ ಮೊಸಳೆ ಆಗಮನದ ಬಗ್ಗೆ ಜನ ಆಶ್ಚರ್ಯವ್ಯಕ್ತಪಡಿಸಿದ್ದಾರೆ. ಅನೇಕ ತಿಂಗಳ ಹಿಂದೆಯೇ ಮರಿ ಮೊಸಳೆಯನ್ನು ವ್ಯಕ್ತಿಯೊಬ್ಬರು ಇಲ್ಲಿ ತಂದು ಬಿಟ್ಟ ಅನುಮಾನಗಳಿವೆ. ಅದೇ ಮೊಸಳೆ ದೊಡ್ಡದಾಗಿ ಇದೀಗ ದಡದಲ್ಲಿ ಕಾಣಿಸಿಕೊಂಡ ಬಗ್ಗೆ ಶಂಕಿಸಲಾಗಿದೆ. ರಾತ್ರಿ ವೇಳೆ ಹೆದ್ದಾರಿ ಅಂಚಿನಲ್ಲಿ ಕಾಣಿಸಿದ ಮೊಸಳೆಯನ್ನು ವ್ಯಕ್ತಿಯೊಬ್ಬರು ಮೊಬೈಲಿನಲ್ಲಿ ಚಿತ್ರಿಕರಿಸಿದ್ದಾರೆ.