ಕದಿಯುವುದನೇ ಕಾಯಕವನ್ನಾಗಿಸಿಕೊಂಡಿದ್ದ `ಸಿದ್ದಿ ಗ್ಯಾಂಗ್’ಗೆ ಪೊಲೀಸರು ಬುದ್ದಿ ಕಲಿಸುವ ಪ್ರಯತ್ನ ಮಾಡಿದ್ದಾರೆ. ಅಂಕೋಲಾ ಸುಂಕಸಾಳದ ಬ್ಯಾಂಕು-ಹೆಗ್ಗಾರಿನ ಕಲ್ಪತರು ಸೊಸೈಟಿ ಹಾಗೂ ಸಮೀಪದ ಕಿರಾಣಿ ಅಂಗಡಿ ದರೋಡೆ ಮಾಡಿದ್ದ ತಂಡದವರು ಸಿಕ್ಕಿಬಿದ್ದಿದ್ದಾರೆ.
ಜನವರಿ ತಿಂಗಳಿನಲ್ಲಿ ಕಳ್ಳರು ಅಂಕೋಲಾ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾದ ಶೌಚಾಲಯ ಒಡೆದು ದರೋಡೆಗೆ ಯತ್ನಿಸಿದ್ದರು. ಅದಾದ ವಾರದೊಳಗೆ ಹೆಗ್ಗಾರಿನ ಕಲ್ಪತರು ಸೊಸೈಟಿಯ ಸೂಪರ್ ಮಾರ್ಟಿಗೆ ನುಗ್ಗಿ ಹಣ ಕದ್ದಿದ್ದರು. ಅದರ ಬೆನ್ನಲ್ಲೇ ಸ್ಥಳೀಯ ಕಿರಾಣಿ ಅಂಗಡಿಯೊAದರ ಬಾಗಿಲು ಮುರಿದಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ಎರಡು ತಿಂಗಳು ಕಳೆದರೂ ಕಳ್ಳರು ಮಾತ್ರ ಸಿಕ್ಕಿಬಿದ್ದಿರಲಿಲ್ಲ.
ಪದೇ ಪದೇ ಕಳ್ಳತನ-ದರೋಡೆ ನಡೆಯುತ್ತಿರುವ ಬಗ್ಗೆ ಗ್ರಾಮದ ಜನ ಅಸಮಧಾನವ್ಯಕ್ತಪಡಿಸಿದ್ದು, ಕಳ್ಳರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದರು. ಕಾರವಾರ ಟೆಕ್ನಿಕಲ್ ವಿಭಾಗದ ಉದಯ ಗುನಗಾ ಹಾಗೂ ಬಬನ್ ಕದಂ ತಂತ್ರಜ್ಞಾನ ಆಧಾರದಲ್ಲಿ ಕಳ್ಳರ ಹುಡುಕಾಟ ನಡೆಸಿದರು. ಕಳ್ಳತನ-ದರೋಡೆ ನಡೆದ ಅವಧಿಯಲ್ಲಿ ಹಳವಳ್ಳಿಯ ವಿನಾಯಕ ಕಮಲಾಕರ ಸಿದ್ದಿ (19) ಅದೇ ಪ್ರದೇಶದಲ್ಲಿ ಓಡಾಡಿರುವ ಸುಳಿವು ಸಿಕ್ಕಿತು. ವಿನಾಯಕ ಸಿದ್ದಿ ಅವರ ಜೊತೆ ಅಂಕೋಲಾ ದುಗ್ಗದಮನೆಯ ರಾಜೇಶ ಲಕ್ಷö್ಮಣ ಸಿದ್ದಿ (27), ಅಂಕೋಲಾ ಮಳಲಗಾವ್ ಪ್ರಶಾಂತ ಅನಂತ ಸಿದ್ದಿ, ಕಲ್ಲೇಶ್ವರದ ನೀಲೇಶ ಗಣಪತಿ ಸಿದ್ದಿ, ಹಳವಳ್ಳಿಯ ನಾಗೇಶ ಸುಬ್ರಾಯ ಸಿದ್ದಿ ಸಹ ಈ ದರೋಡೆ ಕಾಯಕದಲ್ಲಿ ಜೊತೆಯಾಗಿರುವುದು ಪೊಲೀಸರ ಗಮನಕ್ಕೆ ಬಂದಿತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ ಎಸ್ ವಿ ಅವರ ಸೂಚನೆ ಮೇರೆಗೆ ಪಿಐ ಚಂದ್ರಶೇಖರ ಮಠಪತಿ, ಪಿಸೈ ಗುರುನಾಥ ಹಾದಿಮನಿ, ತನಿಖಾಧಿಕಾರಿ ವಿಶ್ವನಾಥ ನಿಂಗೋಳ್ಳಿ ಸೇರಿ ಆರೋಪಿತರ ಮೇಲೆ ದಾಳಿ ಮಾಡಿದರು. ಪೊಲೀಸ್ ಸಿಬ್ಬಂದಿ ಮಹಾದೇವ ಸಿದ್ದಿ, ಪ್ರಶಾಂತ ನಾಯ್ಕ, ಮಹಾಬಲೇಶ್ವರ ನಾಯಕ, ಸಂತೋಷ ದೊಡಮಣಿ, ಆಸಿಫ್ ಆರ್ ಕೆ, ಶಿವಾನಂದ ನಾಗರದಿನ್ನಿ, ಹೊನ್ನಪ್ಪ ವಗ್ಗಣ್ಣನವರ್, ರಯೀಸ್ ಬಾಗವಾ, ವಿಜಯ ಯಲ್ಲಾಪುರ ಅವರ ಜೊತೆ ಯಲ್ಲಾಪುರ ಪೊಲೀಸ್ ಠಾಣೆಯ ಮಾರುತಿ ಕೆ ಎಚ್ ಅವರು ಈ ಕಾರ್ಯಾಚರಣೆಯಲ್ಲಿ ಜೊತೆಯಾದರು. ಎಲ್ಲರೂ ಸೇರಿ ಆ ಐದು ದರೋಡೆಕೋರರ ಹೆಡೆಮುರಿ ಕಟ್ಟಿದರು. ಅಪರಾಧ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತು ಮಾಡಿ, ಕಳ್ಳರನ್ನು ಜೈಲಿಗೆ ಕಳುಹಿಸಿದರು.