ಬೈಕಿಗೆ ಟಿಪ್ಪರ್ ಗುದ್ದಿದ ಕಾರಣ ಬೈಕ್ ಸವಾರರೊಬ್ಬರು ಸಾವನಪ್ಪಿದ್ದಾರೆ. ದಿನೇಶ ನಾಯ್ಕ ಅವರು ವೇಗವಾಗಿ ಟಿಪ್ಪರ್ ಓಡಿಸಿದ ಪರಿಣಾಮ ನಾಗರಾಜ ಹರಿಕಂತ್ರ ಅವರ ಜೀವನ ಕೊನೆಯಾಗಿದೆ.
ಭಟ್ಕಳದ ಎಡಭದ್ರು ಕ್ರಾಸಿನ ಬಳಿ ಈ ಅಪಘಾತ ನಡೆದಿದೆ. ಮೀನುಗಾರಿಕೆ ನಡೆಸಿಕೊಂಡು ಜೀವನ ನಡೆಸುತ್ತಿದ್ದ ತೂದಳ್ಳಿ ಹಿರೆದೋಮಿ ನಿವಾಸಿ ನಾಗರಾಜ ಸುಕ್ರಾ ಹರಿಕಾಂತ ಅವರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ 66ರ ಹೊನ್ನಾವರ ಪ ಭಟ್ಕಳ ರಸ್ತೆಯಲ್ಲಿ ಅವರು ಬೈಕ್ ಓಡಿಸುವಾಗ ಟಿಪ್ಪರ್ ಗುದ್ದಿದೆ.
ಹೊನ್ನಾವರ ಕಡೆಯಿಂದ ಮುರ್ಡೇಶ್ವರ ಕಡೆಗೆ ಸಾಗುತ್ತಿದ್ದ ಟಿಪ್ಪರ್ ಲಾರಿ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯ ಅವಘಡಕ್ಕೆ ಕಾರಣ. ಅದೇ ದಿಕ್ಕಿನಲ್ಲಿ ಸಾಗುತ್ತಿದ್ದ ನಾಗರಾಜ ಅವರ ಕೆಟಿಎಂ ಬೈಕ್‌ಗೆ ಟಿಪ್ಪರ್ ಹಿಂಭಾಗದಿAದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ನಾಗರಾಜ ಅವರು ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದು ತಲೆಗೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಈ ಸಂಬAಧ ಹೇಮಂತ ನಾರಾಯಣ ಹರಿಕಾಂತ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಟಿಪ್ಪರ್ ಲಾರಿ ಚಾಲಕ ದಿನೇಶ್ ರಾಮಚಂದ್ರ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.