ಯಲ್ಲಾಪುರ ಟಿ ಎಂ ಎಸ್ ಆಡಳಿತಾಧಿಕಾರಿ ಭಾಸ್ಕರ್ ನಾಯ್ಕ ಅವರ ವಿರುದ್ಧ ಎರಡನೇ ದಿನ ಎರಡನೇ ಹಂತದ ಹೋರಾಟ ನಡೆದಿದೆ. ಈ ನಡುವೆ ಭಾಸ್ಕರ್ ನಾಯ್ಕ ಅವರ ನಡೆಯನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. `ಟಿಎಂಎಸ್ ಉಳಿವಿಗೆ ಭಾಸ್ಕರ್ ನಾಯ್ಕ ಅವರ ವಜಾ ಆಗಬೇಕು’ ಎಂದು ಒಂದು ಬಣದವರು ಒತ್ತಾಯಿಸಿದ್ದು, ಟಿಎಂಎಸ್ ಉಳಿವಿಗೆ ಭಾಸ್ಕರ್ ನಾಯ್ಕ ಅವರಂಥ ಅಧಿಕಾರಿ ಅಗತ್ಯ’ ಎಂದು ಇನ್ನೊಂದು ಬಣದವರು ಹೇಳಿದ್ದಾರೆ.
Advertisement. Scroll to continue reading.
ಟಿಎಂಎಸ್ ಉಳಿಸಿ ಆಂದೋಲನ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಅವರು ಭಾಸ್ಕರ್ ನಾಯ್ಕ ಅವರ ವಿರುದ್ಧ ತೊಡೆ ತಟ್ಟಿದ್ದಾರೆ. ಬಿಜೆಪಿ ಕೆಲ ಪ್ರಮುಖರು ಅಗ್ಗಾಶಿಕುಂಬ್ರಿ ಅವರ ಬೆಂಬಲಕ್ಕೆ ನಿಂತಿದ್ದಾರೆ. `ಟಿ ಎಂ ಎಸ್ ಆಡಳಿತಾಧಿಕಾರಿಯಾಗಿರುವ ಭಾಸ್ಕರ ನಾಯ್ಕ ಅವರು ರೈತರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲ ಠರಾವು ಮಾಡಿದ್ದಾರೆ’ ಎಂಬುದು ಹೋರಾಟಗಾರರ ಆಕ್ಷೇಪ. `ಟಿ ಎಂ ಎಸ್ ಉಳಿಸಲು ಭಾಸ್ಕರ ನಾಯ್ಕ ಅವರು ಠರಾವು ಸರಿಯಾಗಿದೆ’ ಎಂಬುದು ಆರ್ ಎಸ್ ಭಟ್ಟ ದೇಸಾಯಿಮನೆ ಹಾಗೂ ಇನ್ನಿತರರ ಅನಿಸಿಕೆ.
ಈ ಎಲ್ಲದರ ನಡುವೆ ಗುರುವಾರ ಹೋರಾಟಗಾರರು ಮುಂಚಿತ ಸೂಚನೆ ಪ್ರಕಾರ ರಸ್ತೆ ತಡೆ ನಡೆಸಿದ್ದಾರೆ. ಯಲ್ಲಾಪುರದ ಅಂಬೇಡ್ಕರ್ ಸರ್ಕಲ್ ಸುತ್ತುವರೆದು ಹೋರಾಟಗಾರರು ಪ್ರತಿಭಟನೆ ನಡೆಸಿದ್ದು, ತುರ್ತಾಗಿ ಸಂಚರಿಸಬೇಕಾದ ವಾಹನ ಸವಾರರು ಬಸ್ ನಿಲ್ದಾಣ ಒಳ ಹೊಕ್ಕು ಹಾಗೂ ಇನ್ನೊಂದು ಮಾರ್ಗ ಬಳಸಿ ಮುಂದಿನ ಪ್ರಯಾಣ ಬೆಳಸಿದ್ದಾರೆ. ಈ ವೇಳೆ ಅನೇಕ ಭಾಷಣಕಾರರು ಟಿ ಎಂ ಎಸ್’ನಲ್ಲಿ ನಡೆದ ಠರಾವನ್ನು ವಿರೋಧಿಸಿದ್ದಾರೆ.
`ರೈತರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಕೆಲವರು ತಮ್ಮ ಕೈಗೊಂಬೆಯನ್ನಾಗಿಸಿಕೊAಡಿದ್ದಾರೆ. ಟಿ ಎಂ ಎಸ್ ಜಾಗ ನುಂಗಲು ಹೊಂಚು ಹಾಕಿದವರು ಇದೀಗ ಟಿ ಎಂ ಎಸ್ ವ್ಯವಸ್ಥೆಯನ್ನು ಹಾಳು ಮಾಡಲು ಹೊರಟಿದ್ದಾರೆ’ ಎಂದು ದೂರಿದ್ದಾರೆ. ಅಗ್ಗಾಶಿಕುಂಬ್ರಿ ಅವರು ಎಲ್ಲಿಯೂ ಶಾಸಕ ಶಿವರಾಮ ಹೆಬ್ಬಾರ್ ಅವರ ಹೆಸರು ತೆಗೆದುಕೊಳ್ಳದೇ ಇದ್ದರೂ ಅವರನ್ನು ಗುರಿಯಾಗಿರಿಸಿಕೊಂಡೇ ಭಾಷಣ ಮಾಡಿದ ಹಾಗೆ ಕೇಳಿಸಿದ್ದು, ಇದಕ್ಕೆ ಪ್ರತಿಯಾಗಿ ಶಿವರಾಮ ಹೆಬ್ಬಾರ್ ಬೆಂಬಲಿಗರು ಪ್ರತಿಕ್ರಿಯೆ ನೀಡಿದ್ದಾರೆ. `ಟಿ ಎಂ ಎಸ್ ವಿಷಯದಲ್ಲಿ ದಾಖಲಾದ ಕೇಸಿಗೆ ವಕೀಲರ ಫೀ ಎಂದು 13.50 ಲಕ್ಷ ರೂ ವೆಚ್ಚ ಮಾಡಲಾಗಿದೆ. ಈ ರೀತಿ ಸದಸ್ಯರ ಹಣ ಪೋಲು ಮಾಡುವುದು ಸರಿಯಲ್ಲ’ ಎಂದು ರವಿ ಭಟ್ಟ ಬರಗದ್ದೆ ಹೇಳಿದ್ದಾರೆ.
ಪ್ರಮೋದ ಹೆಗಡೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್ಟ ಹಾಸಣಗಿ, ನಾಗರಾಜ ಕವಡಿಕೆರೆ, ಸುಬ್ರಹ್ಮಣ್ಯ ಉದಾಬೈಲ್, ನರಸಿಂಹ ಸಾತೊಡ್ಡಿ, ಕೆ ಟಿ ಹೆಗಡೆ, ರಾಮಕೃಷ್ಣ ಅಳ್ವೆಗದ್ದೆ, ಅಪ್ಪು ಆಚಾರಿ, ರವಿ ಕೈಟಕರ್ ಮೊದಲಾದವರು ಈ ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪ್ರತಿಭಟನೆಗೆ ವಿರುದ್ಧವಾಗಿ ಎಸ್ ಕೆ ಭಾಗ್ವತ ಗಾಣಗದ್ದೆ, ವಿ ಎಸ್ ಭಟ್ಟ ಉಪಳೇಶ್ವರ, ನವೀನ ಹೆಗಡೆ ಬೈದಹಕ್ಲ, ಮುರುಳಿ ಹೆಗಡೆ, ಗಣೇಶ ಹೆಗಡೆ ಸವಣಗೇರಿ, ನಾರಾಯಣ ಭಟ್ಟ ಬಟ್ಲಗುಂಡಿ, ಲಾರೆನ್ಸ ಸಿದ್ದಿ ಲಾಲಗುಳಿ, ಕೃಷ್ಣ ಶೆಟ್ಟಿ ಕಣ್ಣಿಗೇರಿ, ಟಿವಿ ಭಾಗ್ವತ ನಂದೂಳ್ಳಿ,ಸುಬ್ಬಣ್ಣ ಕುಂಟೆಗಾಳಿ ಕಿಡಿಕಾರಿದ್ದಾರೆ. ಒಟ್ಟಿನಲ್ಲಿ ಟಿ ಎಂ ಎಸ್ ಹೋರಾಟವೂ ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿಯ ಟೀಕೆ-ಟಿಪ್ಪಣಿಗೆ ವೇದಿಕೆ ಮಾಡಿಕೊಟ್ಟಿದೆ.