ತಾಮೀರ ಕೊ ಆಪರೇಟಿವ್ ಸೊಸೈಟಿಯಲ್ಲಿ 5.90 ಕೋಟಿ ರೂ ಅಪರಾತಪರ ನಡೆದಿದೆ. ಸಾವಿರಾರು ಸದಸ್ಯರು ಸೊಸೈಟಿಯಲ್ಲಿರಿಸಿದ ಹಣವನ್ನು ಅಲ್ಲಿನ ಅಧಿಕಾರಿ-ಸಿಬ್ಬಂದಿಯೇ ಕೊಳ್ಳೆಹೊಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅನೇಕ ತಾಲೂಕುಗಳಲ್ಲಿ ತಾಮೀರ ಕೊ ಆಪರೇಟಿವ್ ಸೊಸೈಟಿ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ದಾಂಡೇಲಿ ಶಾಖೆಯಲ್ಲಿ ಅಪರಾತಪರ ನಡೆದಿರುವುದು ಬಹಿರಂಗವಾಗಿದೆ. ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ಸದಸ್ಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು, ನಕಲಿ ಚಿನ್ನಾಭರಣ ಅಡವಿರಿಸಿ ಸಾಲಪಡೆದು ಮೋಸ ಮಾಡಿರುವುದು ಗೊತ್ತಾಗಿದೆ. 2021ರ ಮಾರ್ಚ 17ರಿಂದ 2024ರ ಜನವರಿ 2ರವರೆಗಿನ ಅವಧಿಯಲ್ಲಿ ಈ ಅವ್ಯವಹಾರ ನಡೆದಿದೆ. ಸದಸ್ಯರಿಂದ ಯಾವುದೇ ದಾಖಲೆ ಹಾಗೂ ಕೆವೈಸಿಪಡೆಯದೇ ಖಾತೆ ಸೃಷ್ಠಿಸಿದ ಬಗ್ಗೆ ಪರಿಶೀಲನೆ ಮಾಡಿದಾಗ ಅವರ ಖಾತೆ ಮೂಲಕ ವ್ಯವಹರಿಸಿದ ಚಿನ್ನವೂ ನಕಲಿ ಎಂಬುದು ಗೊತ್ತಾಗಿದೆ.
ಸೊಸೈಟಿಯ ಶಾಖಾ ಮ್ಯಾನೇಜರ್ ಆಗಿದ್ದ ಮೀರಕರೀಂ ಮೀರ ಇಸ್ಮಾಯಲ್ ಹಾಗೂ ಕಲೀಮುದ್ದೀನ್ ಖಾನ್ ಸರದಾರ್ ಖಾನ್ ಸೇರಿ ಹಣಹೊಡೆಯುವ ತಂತ್ರ ರೂಪಿಸಿದ್ದಾರೆ. ಇದಕ್ಕೆ ಆ ಶಾಖೆಯಲ್ಲಿ ಕ್ಲರ್ಕ & ಕ್ಯಾಶಿಯರ್ ಆಗಿರುವ ಮಂಚಾಣಿ ಚೂಡಾಮಣಿ ನೇತ್ರೇಕರ್, ನಿವೃತ್ತ ಸಿಬ್ಬಂದಿ ಮಹಮದಹನೀಪ್ ಖಾಸಿಂಸಾಬ್ ಮೋಮೀನ್, ಕ್ಲರ್ಕ & ಕ್ಯಾಶಿಯರ್ ಆಗಿರುವ ಮಹಮದ್ ಇಬ್ರಾಹಿಂ ಗುಲಾಮ ಮಹಮದ್ದೀನ್, ಸಿಫಾಯಿ ಆಗಿರುವ ನೂರ್‌ಅಹ್ಮದ್ ಉಸ್ಮಾನ್‌ಸಾಬ್ ಮುಲ್ಲಾ, ಕ್ಲರ್ಕ ಆಗಿ ಕೆಲಸಕ್ಕೆ ಸೇರಿದ ಫಯಾಜ್ ಅಬ್ದುಲ್ ಶೇಖ್ ಹಾಗೂ ಹಲೀಬಾಬಾ ಶಬೀರ್ ಖಾನ್ ಅವರ ಜೊತೆ ಸಫಾರರಾಗಿರುವ ಸಂಜಯ ಸದಾನಂದ ರೇವಣಕರ್ ಅವರು ಕೈ ಜೋಡಿಸಿದ್ದಾರೆ. ಅವರೆಲ್ಲರೂ ಸೇರಿ ಸೊಸೈಟಿ ಸದಸ್ಯರು ಹೂಡಿಕೆ ಮಾಡಿದ್ದ ಒಟ್ಟು 5,09,09,450ರೂ ಲೂಟಿ ಮಾಡಿದ್ದಾರೆ.
ಈ ಹಣ ಕೊಳ್ಳೆ ಹೊಡೆಯುವುದಕ್ಕಾಗಿ ಅವರೆಲ್ಲರೂ ಸೇರಿ ಕಾರ್ಯತಂತ್ರ ರೂಪಿಸಿದ್ದಾರೆ. ಇದಕ್ಕಾಗಿ ಮೊದಲು ಸದಸ್ಯರ ಹೆಸರಿನಲ್ಲಿ 208 ನಕಲಿ ಖಾತೆ ಸೃಷ್ಠಿಸಿದ್ದಾರೆ. ಅವರನ್ನು ಸಾಲಗಾರರು ಎಂದು ಬಿಂಬಿಸಿ, ಅವರ ಹೆಸರಿನಲ್ಲಿ ನಕಲಿ ಬಂಗಾರ ಅಡವಿರಿಸಿ ಸಾಲ ಮಂಜೂರಿ ಮಾಡಿಸಿದ್ದಾರೆ. ಅದಾದ ನಂತರ ಆ ಸಾಲದ ಹಣವನ್ನು ತಾವುಪಡೆದು ಮೋಸ ಮಾಡಿದ್ದಾರೆ. 2025ರ ಜೂನ್ 25ರಂದು ದೊರೆತ ಲೆಕ್ಕ ಪರಿಶೋಧನಾ ವರದಿಯಲ್ಲಿ ಮಾಹಿತಿ ಹೊರಬಿದ್ದಿದೆ. ಸದ್ಯ ತಾಮೀರ ಕೊ ಆಪರೇಟಿವ್ ಸೊಸೈಟಿಗೆ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದ ಕಾರಣ ಆಡಳಿತಾಧಿಕಾರಿಗಳು ಈ ಅಪರಾತಪರ ಗಮನಿಸಿದ್ದಾರೆ. ಅಂಕೋಲಾದ ತಾಮೀರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಜನರಲ್ ಮ್ಯಾನೇಜರ್ ಮಹಮದ್ ಅಜೀಮ್ ರುಕ್ಮುದ್ದೀನ್ ಶೇಖ್ ಈ ಬಗ್ಗೆ ಚರ್ಚಿಸಿ, ಪೊಲೀಸ್ ದೂರು ನೀಡಿದ್ದಾರೆ.