`ಗೃಹ ಸಚಿವ ಜಿ ಪರಮೇಶ್ವರ ಅವರ ಆಪ್ತ ಗೋಪಾಲಕೃಷ್ಣ ನಾಯಕ ಅವರ ವಿರುದ್ಧದ ಅಳಲು ಆಲಿಸಲು ಗೃಹ ಸಚಿವರೇ ಬರಬೇಕು’ ಎಂದು ನ್ಯಾಯವಾದಿ ನಾಗರಾಜ ನಾಯಕ ಅವರು ಪಟ್ಟುಹಿಡಿದಿದ್ದಾರೆ. ನಾಗರಾಜ ನಾಯಕ ಅವರು ನಡೆಸುತ್ತಿರುವ ಈ ಹೋರಾಟ ಶನಿವಾರ ಮೂರನೇ ದಿನ ಮುಗಿಸಿದೆ. ಹೋರಾಟಕ್ಕೆ ಸರ್ಕಾರ ಸ್ಪಂದಿಸದ ಕಾರಣ ಶನಿವಾರದಿಂದ ನಾಗರಾಜ ನಾಯಕ ಅವರು ಅನ್ನ-ಆಹಾರ ತ್ಯಜಿಸಿದ್ದಾರೆ.
ಅಂಕೋಲಾದ ವಂದಿಗೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ನಾಗರಾಜ ನಾಯಕ ಅವರು ಅತಿಥಿಯಾಗಿದ್ದು, ಅವರ ಭಾಷಣದ ವೇಳೆ ಕೆಲವರು ಕೂಗಾಟ ನಡೆಸಿದ್ದರು. ಆಗ, ನಾಗರಾಜ ನಾಯಕ ಅವರು ಪುಂಡರನ್ನು ಗದರಿಸಿದ್ದು ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಗೋಪಾಲಕೃಷ್ಣ ನಾಯಕ ಅವರ ಕುಮ್ಮಕ್ಕಿನಿಂದಲೇ ಅವರ ಆಪ್ತರು ಈ ರೀತಿ ವರ್ತಿಸಿದ ಬಗ್ಗೆ ನಾಗರಾಜ ನಾಯಕ ಅವರು ದೂರಿದ್ದರು. ಪೊಲೀಸರ ವರ್ತನೆಯನ್ನು ಖಂಡಿಸಿ ಅವರು ಆ ದಿನ ರಾತ್ರಿಯೇ ಹೋರಾಟ ಶುರು ಮಾಡಿದ್ದು, ಶನಿವಾರ ಆ ಹೋರಾಟ ಮೂರನೇ ದಿನ ಮುಗಿಸಿದೆ.
ನಾಗರಾಜ ನಾಯಕ ಅವರ ಹೋರಾಟ ಅರಿತ ಗೋಪಾಲಕೃಷ್ಣ ನಾಯಕ ಅವರು ಬೆಂಗಳೂರಿನಿoದಲೇ ಪ್ರತಿಕ್ರಿಯೆ ನೀಡಿದ್ದರು. `ನನಗೂ ಆ ವಿದ್ಯಮಾನಕ್ಕೂ ಸಂಬoಧವಿಲ್ಲ. ಈ ಬಗ್ಗೆ ದೇವರ ಮೇಲೆ ಪ್ರಮಾಣ ಮಾಡುವೆ’ ಎಂದು ಗೋಪಾಲಕೃಷ್ಣ ನಾಯಕ ಅವರು ಹೇಳಿದ್ದರು. ಅದರಂತೆ, ವಂದಿಗೆಗೆ ಬಂದ ಅವರು ದೇವರ ಮೇಲೆ ಪ್ರಮಾಣ ಮಾಡಿದ್ದರು. ಅದಾಗಿಯೂ, `ನಾಗರಾಜ ನಾಯಕ ಅವರು ಗೃಹ ಸಚಿವರು ಸ್ಥಳಕ್ಕೆ ಬರಬೇಕು’ ಎಂದು ಹೋರಾಡುತ್ತಿದ್ದು, ಇದಕ್ಕೆ ಗೃಹ ಸಚಿವರಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಹೀಗಾಗಿ ಅವರು ಶನಿವಾರ ಅನ್ನ-ಆಹಾರ ತ್ಯಜಿಸಿ ಹೋರಾಟ ಮುಂದುವರೆಸಿದ್ದಾರೆ.
ಅನ್ನ ಆಹಾರ ತ್ಯಜಿಸಿದ ಈ ಹೋರಾಟ ಅಹೋರಾತ್ರಿ ನಡೆಯಲಿದೆ. ಮೂರನೇ ದಿನದ ಹೋರಾಟಕ್ಕೆ ಹಲವರು ಆಗಮಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋಪಾಲಕೃಷ್ಣ ನಾಯಕ ಮತ್ತು ಸಹಚರರ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಅಕ್ರಮ ಚಟುವಟಿಕೆಗಳಿಂದ ಹುಟ್ಟಿಕೊಂಡಿರುವ ಗೂಂಡಾಗಿರಿ ಸಂಪೂರ್ಣವಾಗಿ ನಿಲ್ಲಬೇಕು. ಜಿಲ್ಲಾಧಿಕಾರಿಗಳು, ಅಕ್ರಮ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುತ್ತಿರುವ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು’ ಎಂದು ನಾಗರಾಜ ನಾಯಕ ಅವರ ಬೆಂಬಲಿಗರು ಆಗ್ರಹಿಸಿದ್ದಾರೆ. ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ನಾಗರಾಜ ನಾಯಕ ಅವರು ಘೋಷಿಸಿದ್ದಾರೆ.