ಜೊಯಿಡಾ ಗಣೇಶಗುಡಿಯ ಸಿಲ್ವರ್ ಬಿಲ್ ರೆಸಾರ್ಟ ಬಳಿ ಅಳವಡಿಸಿದ್ದ ಪಂಪ್‌ಸೆಟ್’ನ ವಿದ್ಯುತ್ ಸ್ಪರ್ಶದಿಂದ ರಾಪ್ಟಿಂಗ್ ಮಾಡುತ್ತಿದ್ದ ಸಾಪ್ಟವೇರ್ ಉದ್ಯೋಗಿಯೊಬ್ಬರು ಸಾವನಪ್ಪಿದ್ದಾರೆ. ಅವರ ಜೊತೆಯಿದ್ದ ಮತ್ತೆ ನಾಲ್ವರಿಗೂ ವಿದ್ಯುತ್ ಆಘಾತವಾಗಿದೆ.
ಜೊಯಿಡಾದ ಗಣೇಶಗುಡಿಯಲ್ಲಿ ಸಿಲ್ವರ್ ಬಿಲ್ ರೆಸಾರ್ಟ ಇದ್ದು, ಅಲ್ಲಿ ಸುರಕ್ಷತೆ ಇಲ್ಲದೇ ವಿದ್ಯುತ್ ಪಂಪ್‌ಸೆಟ್ ಅಳವಡಿಸಲಾಗಿತ್ತು. ಈ ಬಗ್ಗೆ ಸ್ಥಳೀಯರು ಆಕ್ಷೇಪಿಸಿದರೂ ರೆಸಾರ್ಟಿನವರು ತಲೆಕೆಡಿಸಿಕೊಂಡಿರಲಿಲ್ಲ. ಹೀಗಿರುವಾಗ, ವಿಜಯವಾಡದ ಮಹೇಶ್ (27) ಅವರು ತಮ್ಮ ನಾಲ್ವರು ಸ್ನೇಹಿತರ ಜೊತೆ ಪ್ರವಾಸಿ ತಾಣ ವೀಕ್ಷಣೆಗೆ ಬಂದಿದ್ದರು. ಕಾಳಿ ನದಿಯಲ್ಲಿ ರಾಪ್ಟಿಂಗ್ ಮಾಡುವಾಗ ಅವರಿಗೆ ಅಲ್ಲಿದ್ದ ವಿದ್ಯುತ್ ಸ್ಪರ್ಶವಾಗಿದ್ದು, ಅಲ್ಲಿಯೇ ಮಹೇಶ್ ಅವರು ಸಾವನಪ್ಪಿದರು.
ಅವರ ಜೊತೆಗಿದ್ದ ನಾಲ್ವರಿಗೂ ವಿದ್ಯುತ್ ಸ್ಪರ್ಶದ ಅನುಭವ ಆಗಿದೆ. ಆದರೆ, ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪಂಪ್‌ಸೆಟ್ ನೀರಿನಿಂದ ವಿದ್ಯುತ್ ಪ್ರವಹಿಸಿ ಮಹೇಶ್ ಅವರು ಸಾವನಪ್ಪಿದ ಬಗ್ಗೆ ಗೊತ್ತಾಗಿದೆ. ಜಲ ಸಾಹಸ ಕ್ರೀಡೆಗಾಗಿ ಬಂದ ಮಹೇಶ ಅವರು ಜೀವ ಕಳೆದುಕೊಂಡಿದ್ದಾರೆ. ನೀರಿನ ಪಂಪ್ ಬಳಿ ಇದ್ದ ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಸ್ಪರ್ಶವಾಗಿದ್ದು, ಅವರನ್ನು ರಕ್ಷಿಸಲು ಮುಂದಾದವರು ಆಘಾತಕ್ಕೆ ಒಳಗಾಗಿದ್ದಾರೆ.