ಶಿರೂರು ಗುಡ್ಡ ಕುಸಿತದ ವೇಳೆ ಆ ರಕ್ಷಣಾ ಕಾರ್ಯಾಚರಣೆಯಲ್ಲಿ ಮುಂಚೂಣಿಯಲ್ಲಿದ್ದ ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿ ಶ್ರೀಶೈಲ ಚೌಗಲೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
37 ವರ್ಷದ ಚೌಗಲೆ ಅವರು ಬೆಳಗಾವಿಯ ಚನ್ನಮ್ಮ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮನೆಯ ಕೋಣೆಯ ಬಾಗಿಲು ಬಹಳ ಸಮಯ ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಕುಟುಂಬಸ್ಥರು ಸಹೋದ್ಯೋಗಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಗಿಲು ಒಡೆದು ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಬದುಕಿರಲಿಲ್ಲ.
ಅಂಕೋಲಾದ ಶಿರೂರು ಗುಡ್ಡ ಕುಸಿತದ ವೇಳೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಣ್ಣಿನಡಿ ಸಿಲುಕಿದ್ದವರ ರಕ್ಷಣಾ ಕಾರ್ಯದಲ್ಲಿ ಚೌಗಲೆ ಅವರು ದಿನ-ರಾತ್ರಿ ಶ್ರಮಿಸಿದ್ದರು. ಸಂಕಷ್ಟದ ಸಂದರ್ಭದಲ್ಲೂ ಧೈರ್ಯದಿಂದ ತಂಡವನ್ನು ಮುನ್ನಡೆಸಿದ ಅವರ ಸೇವೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಉತ್ತಮ ಸೇವೆಗಾಗಿ ಅವರಿಗೆ ಮುಖ್ಯಮಂತ್ರಿ ಬಂಗಾರದ ಪದಕವೂ ಲಭಿಸಿತ್ತು.
ಕರ್ತವ್ಯದಲ್ಲಿ ಚುರುಕಾಗಿ ಗುರುತಿಸಿಕೊಂಡಿದ್ದ ಅಧಿಕಾರಿಯ ಅಕಾಲಿಕ ನಿಧನದಿಂದ ಸಹೋದ್ಯೋಗಿಗಳು ಹಾಗೂ ಸಾರ್ವಜನಿಕರು ಶೋಕಕ್ಕೊಳಗಾಗಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.