ಅಂಕಿ-ಸoಖ್ಯೆಗಳ ಆಧಾರದಲ್ಲಿ ಅದೃಷ್ಟದ ಆಟ ಆಡಿಸಿ ಹಣ ಮಾಡುತ್ತಿದ್ದ ಅಂಕೋಲಾದ ಶ್ಯಾಮಸುಂದರ ಬಂಟ್ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಹೊರಗೋಡಿಸಲಾಗಿದೆ. ಮುಂದಿನ ಆರು ತಿಂಗಳ ಕಾಲ ಶ್ಯಾಮಸುಂದರ್ ಬಂಟ್ ಅವರು ಜಿಲ್ಲೆಗೆ ಕಾಲಿರಿಸುವ ಹಾಗಿಲ್ಲ!
ಅಂಕೋಲಾದ ಕೇಣಿಯಲ್ಲಿ ಶ್ಯಾಮಸುಂದರ ಗೋಪಿನಾಥ ಬಂಟ್ ಅವರು ವಾಸವಾಗಿದ್ದರು. ಜೀವನಕ್ಕಾಗಿ ಗೂಡಂಗಡಿಯಿರಿಸಿ ಚಿಲ್ಲರೆ ವ್ಯಾಪಾರ ಮಾಡಿಕೊಂಡಿದ್ದ ಅವರು ಕ್ರಮೇಣ ಅಲ್ಲಿ ಮಟ್ಕಾ ಸಂಖ್ಯೆಗಳ ಮಾರಾಟ ಶುರು ಮಾಡಿದ್ದರು. ಜೊತೆಗೆ ಸಣ್ಣಪುಟ್ಟ ಜಗಳ-ಹೊಡೆದಾಟ ಪ್ರಕರಣಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಪೊಲೀಸರು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಶ್ಯಾಮಸುಂದರ್ ಬಂಟ್ ಅವರ ವರ್ತನೆಯಲ್ಲಿ ಬದಲಾವಣೆ ಆಗಿರಲಿಲ್ಲ.
2011ರಿಂದಲೂ ಪೊಲೀಸರು ಶ್ಯಾಮಸುಂದರ ಬಂಟ್ ಅವರ ಮೇಲೆ ಕಣ್ಣಿಟ್ಟದರು. ಒಟ್ಟು 10 ಪೊಲೀಸ್ ಕೇಸುಗಳನ್ನು ಸಹ ಅವರು ಎದುರಿಸುತ್ತಿದ್ದರು. ಶ್ಯಾಮಸುಂದರ ಬಂಟ್ ಅವರಿಗೆ ಸಾಕಷ್ಟು ಎಚ್ಚರಿಕೆ ಕೊಟ್ಟರೂ ಅವರಲ್ಲಿ ಸುಧಾರಣೆ ಕಾಣಲಿಲ್ಲ. ಹೀಗಾಗಿ ಅಂಕೋಲಾ ಪೊಲೀಸರು ಶ್ಯಾಮಸುಂದರ ಅವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡಿದರು. ಅಂಕೋಲಾ ಠಾಣೆಯಿಂದ ಬಂದ ಶಿಫಾರಸ್ಸು ವರದಿ ಗಮನಿಸಿದ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸಹ ಶ್ಯಾಮಸುಂದರ ಬಂಟ್ ಅವರಿಗೆ ನೋಟಿಸ್ ಜಾರಿ ಮಾಡಿದರು. ಆ ನೋಟಿಸಿಗೆ ಸಹ ಖ್ಯಾರೇ ಅನ್ನದ ಕಾರಣ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಿದರು.
ಮೇ 7ರಂದು ಶ್ಯಾಮಸುಂದರ ಬಂಟ್ ಅವರನ್ನು ಪೊಲೀಸರು ವಶಕ್ಕೆಪಡೆದರು. ತಮ್ಮದೇ ವಾಹನದಲ್ಲಿ ಅವರನ್ನು ಗುಲ್ಬರ್ಗಾಗೆ ಕರೆದೊಯ್ದರು. ಅಲ್ಲಿನ ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶ್ಯಾಮಸುಂದರ ಬಂಟ್ ಅವರನ್ನು ಅಲ್ಲಿಯೇ ಬಿಟ್ಟರು. ಪೊಲೀಸ್ ಅಧೀಕ್ಷಕರು ಹೊರಡಿಸಿದ ಆದೇಶವನ್ನು ಅವರ ಕೈಗೆ ಕೊಟ್ಟು ಮುಂದಿನ ಆರು ತಿಂಗಳ ಕಾಲ ಊರಕಡೆ ಬಾರದಂತೆ ಸೂಚಿಸಿದರು. ಗುಲ್ಬರ್ಗಾ ಪೊಲೀಸರಿಗೂ ಶ್ಯಾಮಸುಂದರ ಬಂಟ್ ಅವರ ದಾಖಲಾತಿಗಳ ಕಡತ ನೀಡಿ ಅಂಕೋಲಾ ಪೊಲೀಸರು ಊರಿಗೆ ಮರಳಿದರು.