ಹಳಿಯಾಳದ ಮದ್ನಳ್ಳಿ ಬಳಿಯಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಎದುರು ಕಾರೊಂದು ಲಾರಿಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಮಡಕೇರಿಯ ಪ್ರಶಾಂತ ಸಿ ಎಚ್ ಅವರು ಸಾವನಪ್ಪಿದ್ದಾರೆ.
ಮೇ 8ರ ಬೆಳಗ್ಗೆ ಮಂಗಳೂರಿನ ಮಹಮದ್ ರಫೀಕ್ ಇಸ್ಮಾಯಲ್ ಬ್ಯಾರಿ ಅವರು ಆಳ್ನಾವರದಿಂ ಹಳಿಯಾಳದ ಕಡೆ ಕಾರು ಓಡಿಸಿಕೊಂಡು ಬರುತ್ತಿದ್ದರು. ಈ ಕಾರಿನಲ್ಲಿ ಮಡಿಕೇರಿಯ ಕೃಷ್ಣ ಎಚ್ ಟಿ, ಮೈಸೂರಿನ ಎಂ ಟಿ ಕುಮಾರ, ಕೊಡಗುವಿನ ಸಂತೋಷಕುಮಾರ ಎಚ್ ಕೆ ಹಾಗೂ ಮಡಿಕೇರಿಯ ಪ್ರಶಾಂತ ಸಿ ಎಸ್ ಅವರು ಕುಳಿತಿದ್ದರು. ಕಾರು ವೇಗವಾಗಿ ಸಾಗಿದ್ದು, ಮದ್ನಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿತು. ಈ ವೇಳೆ ಆಳ್ನಾವರದಿಂದ ಹಳಿಯಾಳಕಡೆ ಬರುತ್ತಿದ್ದ ಲಾರಿಗೆ ಆ ಕಾರು ಗುದ್ದಿತು.
ಕಾರು ಗುದ್ದಿದ ರಭಸಕ್ಕೆ ಎಲ್ಲರೂ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಕಾರಿನಲ್ಲಿದ್ದವರು ಕೈ-ಕಾಲು, ಸೊಂಟ ಮುರಿದುಕೊಂಡರು. ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ವಾಹನದೊಳಗೆ ಸಿಲುಕಿದ್ದ ಸವಾರರು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದರು. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರು ಹಾಗೂ ತುರ್ತು ಸೇವಾ ಸಿಬ್ಬಂದಿಯ ಸಹಾಯದಿಂದ ಗಾಯಾಳುಗಳನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆ ಮಾಡಿದರು. ಈ ಅಪಘಾತದಲ್ಲಿ ಪ್ರಶಾಂತ ಸಿ ಎಸ್ ಅವರ ಕಿವಿ-ಮೂಗಿನಿಂದ ರಕ್ತ ಬರುತ್ತಿದ್ದುೆಲ್ಲರ ಜೊತೆ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಚಿಕಿತ್ಸೆ ನೀಡಿದರೂ ಅದಕ್ಕೆ ಸ್ಪಂದಿಸದೇ ಪ್ರಶಾಂತ ಅವರು ಸಾವನಪ್ಪಿದರು.
ಈ ಅಪಘಾತದಲ್ಲಿ ಕಾರು ಚಾಲಕ ಮಹಮದ್ ರಫೀಕ್ ಅವರಿಗೂ ಗಾಯವಾಗಿದ್ದು, ಅವರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಲಾರಿ ಸಹ ಜಖಂ ಆಗಿದೆ. ವೇಗವಾಗಿ ಕಾರು ಓಡಿಸಿ ಅಪಘಾತಪಡಿಸಿದ ಚಾಲಕನ ವಿರುದ್ಧ ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.