ಅವರಿವರನ್ನು ಕಾಡಿಸಿ-ಪೀಡಿಸಿ ಹಣ ವಸೂಲಿ ಮಾಡುವುದರ ಜೊತೆ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಯೇ ಅನೇಕರನ್ನು ಬೆದರಿಸುತ್ತಿದ್ದ ಹಳಿಯಾಳದ ರಾಕೇಶ ವಾಲೇಕರ ಅವರನ್ನು ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಜಯಂತವಾಣಿ ಅವರಿಗೆ ಬೆದರಿಕೆ ಒಡ್ಡಿ ಗೋವಾದಲ್ಲಿ ಅಡಗಿಕೊಂಡಿದ್ದ ರಾಕೇಶ ವಾಲೇಕರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಹಳಿಯಾಳ ಪಟ್ಟಣದ ಚವ್ಹಾಣ ಪ್ಲಾಟಿನಲ್ಲಿ ವಾಸವಾಗಿರುವ ರಾಕೇಶ ವಾಲೇಕರ ಅವರು ಸಾಕಷ್ಟು ಜನರನ್ನು ಬೆದರಿಸಿದ್ದರು. ಬೆದರಿಕೆಗೆ ಒಳಗಾದವರ ಬೆದರಿಕೆಯಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಅವರು ಅಯ್ಯಪ್ಪ ಸ್ವಾಮಿಯ ಮೊರೆ ಹೋಗಿದ್ದರು. ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿಯೇ ಅವರು ಅಮಾಯಕರನ್ನು ಹೆದರಿಸುತ್ತಿದ್ದರು. ವರ್ಷವಿಡೀ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದರ ಮೂಲಕ ಹೊಡೆದಾಟಕ್ಕೆ ಬರುವವರಿಂದಲೂ ಅವರು ತಪ್ಪಿಸಿಕೊಳ್ಳುತ್ತಿದ್ದರು. ರಾಕೇಶ ವಾಲೇಕರ ಅವರಿಗೆ ಕೆಟ್ಟದಾಗಿ ಬೈಯ್ಯಲು ಬಂದವರು ಸಹ ಅಯ್ಯಪ್ಪ ಸ್ವಾಮಿ ವೇಷ ನೋಡಿ ಕೈ ಮುಗಿದು ಹೋಗುತ್ತಿದ್ದರು.
2024ರಲ್ಲಿ ಕಾನ್ವೆಂಟ್ ರೋಡ್ ನಿವಾಸಿ ರಾಹುಲ್ ಜಯವಂತವಾಣಿ ಅವರನ್ನು ರಾಕೇಶ ವಾಲೇಕರ್ ಅವರು ಬೆದರಿಸಿದ್ದರು. `1ಲಕ್ಷ ರೂ ಹಣ ಕೊಡು’ ಎಂದು ರಾಕೇಶ ವಾಲೇಕರ್ ದುಂಬಾಲು ಬಿದ್ದಿದ್ದು, ಅದನ್ನು ನೀಡದ ಕಾರಣ ಬೈಕ್ ಅಪಹರಿಸಿಕೊಂಡು ಹೋಗಿದ್ದರು. ಅದಾದ ನಂತರ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹ ಒಡ್ಡಿದ್ದರು. ಈ ಬಗ್ಗೆ ರಾಹುಲ್ ಜಯಂತವಾಣಿ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದು, ಅದಾದ ನಂತರ ರಾಕೇಶ್ ವಾಲೇಕರ್ ಊರು ಬಿಟ್ಟು ಪರಾರಿಯಾಗಿದ್ದರು.
ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾದರೂ ರಾಕೇಶ್ ವಾಲೇಕರ್ ವಿಚಾರಣೆಗೆ ಬಂದಿರಲಿಲ್ಲ. ಈ ಹಿನ್ನಲೆ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದ್ದು, ಪೊಲೀಸರು ಆರೋಪಿಗಾಗಿ ತೀವೃ ಶೋಧ ಶುರು ಮಾಡಿದರು. ಮೇ 16ರಂದು ರಾಕೇಶ್ ವಾಲೇಕರ್ ಅವರು ಗೋವಾದ ಪೊಂಡಾದಿAದ ಹಳಿಯಾಳಕ್ಕೆ ಬರುತ್ತಿರುವ ಮಾಹಿತಿ ಆಧರಿಸಿ ವಿಶೇಷ ಕಾರ್ಯಾಚರಣೆ ನಡೆಸಿದರು. ನಾಲ್ಕು ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ವೇಷ ಮರೆಸಿಕೊಂಡಿದ್ದ ರಾಕೇಶ್ ವಾಲೇಕರ್ ಸಿಕ್ಕಿಬಿದ್ದರು. ಅನಮೋಡ ಚೆಕ್ಪೋಸ್ಟ್ನಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿದರು. ಹಳಿಯಾಳ ಡಿವೈಎಸ್ಪಿ ಶಿವಾನಂದ ಮದರಕಂಡಿ ಮತ್ತು ಸಿಪಿಐ ಜಯಪಾಲ್ ಪಾಟೀಲ್ ಅವರ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಪಿಸೈ ಬಸವರಾಜ ಮಬನೂರ, ಕೃಷ್ಣಾ ಅರಕೇರಿ ಜೊತೆ ಸಿಬ್ಬಂದಿ ಮಹಮ್ಮದ್ ಹನೀಪ್ ಮುಲ್ಲಾ, ಸಂತೋಷ ಡಿ ಉರ್ಮಿ, ರಾಘವೇಂದ್ರ ಕೆರವಾಡ ಆರೋಪಿ ಬಂಧನಕ್ಕೆ ಶ್ರಮಿಸಿದ್ದರು.