ಸಿದ್ದಾಪುರದ ನೆಜ್ಜೂರಿನ ಹಪಿಜುಲ್ಲಾ ಖಾನ್ ಅವರ ಮೊಮ್ಮಕ್ಕಳು ನೀರು ಆಡುವಾಗ ಆ ನೀರು ರಿಯಾಜ್ ಶೇಖ್ ಅವರಿಗೆ ಸಿಡಿದಿದೆ. ಇದರಿಂದ ಸಿಟ್ಟಾದ ರಿಯಾಜ್ ಶೇಖ್ ಅವರು ಹಪಿಜುಲ್ಲಾ ಖಾನ್ ಅವರ ಮನೆಯೊಳಗೆ ನುಗ್ಗಿ ಗಲಾಟೆ ಮಾಡಿದ್ದು, ಆ ಬಗ್ಗೆ ಹಪಿಜುಲ್ಲಾ ಖಾನ್ ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸ್ ದೂರು ನೀಡಿದ ಸಿಟ್ಟಿಗೆ ರಿಯಾಜ್ ಶೇಖ್ ಅವರು ಈ ದಿನ ಹಪಿಜುಲ್ಲಾ ಖಾನ್ ಅವರ ಕಡೆ ಕತ್ತಿ ಬೀಸಿದ್ದಾರೆ.
ಸಿದ್ದಾಪುರದ ನೆಜ್ಜೂರಿನಲ್ಲಿ ಹಪಿಜುಲ್ಲಾ ಖಾದರ್ ಖಾನ್ (56) ಅವರು ವಾಸವಾಗಿದ್ದಾರೆ. ಏಪ್ರಿಲ್ 13ರಂದು ರಾತ್ರಿ ಅವರ ಮೊಮ್ಮಕ್ಕಳು ಮನೆಯ ಮುಂದೆ ನೀರಿನ ಆಟ ಆಡುತ್ತಿದ್ದು, ಆಗ ಅಲ್ಲಿ ಅದೇ ಊರಿನ ರಿಯಾಜ್ ಶೇಖ್ ಭಾಷಾ ಅವರು ಆಗಮಿಸಿದ್ದರು. ಮಕ್ಕಳು ಆಡುತ್ತಿದ್ದ ನೀರು ರಿಯಾಜ್ ಶೇಖ್ ಅವರಿಗೆ ತಾಗಿದ್ದರಿಂದ ಸಿಟ್ಟಾಗಿದ್ದರು. ಬಳಿಕೆ ಹಪಿಜುಲ್ಲಾ ಖಾನ್ ಅವರ ಮನೆಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿದ್ದವರಿಗೆ ನಿಂದಿಸಿದ್ದರು.
ಈ ನಿಂದನೆ ಸಹಿಸದ ಹಪಿಜುಲ್ಲಾ ಖಾನ್ ಕುಟುಂಬದವರು ಪೊಲೀಸ್ ದೂರು ನೀಡಿದ್ದರು. ಆ ದೂರು ನೀಡಿದ ಹಿನ್ನಲೆ ರಿಯಾಜ್ ಶೇಖ್ ಅವರು ಇನ್ನಷ್ಟು ಸಿಟ್ಟಾದರು. ಮೇ 8ರ ರಾತ್ರಿ ಹಪಿಜುಲ್ಲಾ ಖಾನ್ ಅವರ ಮನೆ ಬಳಿ ಬಂದ ರಿಯಾಜ್ ಶೇಖ್ ಬಾಗಿಲು ಒದ್ದು ಗಲಾಟೆ ಮಾಡಿದ್ದರು. ಜೊತೆಗೆ ಹಪಿಜುಲ್ಲಾ ಖಾನ್ ಅವರ ಮಗನ ಅಂಗಡಿಗೆ ಬೆಂಕಿ ಹಾಕುವುದಾಗಿ ಬೆದರಿಸಿದ್ದರು. ಮೇ 9ರಂದು ಹಪಿಜುಲ್ಲಾ ಖಾನ್ ಅವರು ಮಗನ ಅಂಗಡಿಯಲ್ಲಿದ್ದಾಗ ಅಲ್ಲಿಯೂ ಕತ್ತಿ ಹಿಡಿದು ಬಂದ ರಿಯಾಜ್ ಖಾನ್ ಆ ಕತ್ತಿಯನ್ನು ಅಂಗಡಿ ಕಡೆ ಬೀಸಿದರು. ಕತ್ತಿ ಏಟಿನಿಂದ ಹಪಿಜುಲ್ಲಾ ಖಾನ್ ಅವರು ತಪ್ಪಿಸಿಕೊಂಡರಾದರೂ ಆ ಕತ್ತಿ ಅಂಗಡಿಗೆ ತಾಗಿತು. ಇದರಿಂದ ಬೆದರಿದ ಹಪಿಜುಲ್ಲಾ ಖಾನ್ ಅವರು ಮತ್ತೆ ಪೊಲೀಸ್ ಠಾಣೆ ಮೆಟ್ಟಿಲೇರಿದರು. ಆದ ಅನ್ಯಾಯದ ಬಗ್ಗೆ ವಿವರಿಸಿ, ದೂರು ನೀಡಿದರು.