‘ಕಾಂಗ್ರೆಸ್ ಸರ್ಕಾರ ಗಲಭೆಕೋರರು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಶಕ್ತಿಗಳು ಹಾಗೂ ಮತಾಂಧರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ’ ಎಂದು ಯಲ್ಲಾಪುರ ಬಿಜೆಪಿ ಮಂಡಲದ ಅಧ್ಯಕ್ಷ ಪ್ರಸಾದ್ ಹೆಗಡೆ ಆರೋಪಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಭಟ್ಕಳದಲ್ಲಿ ಭಯದ ವಾತಾವರಣ ನಿರ್ಮಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ದೂರಿದರಯ. ‘ಭಟ್ಕಳದ ಮುರಿನಕಟ್ಟೆ ಪ್ರಕರಣದಲ್ಲಿ ಭಾಗಿಯಾದ ನಿಜವಾದ ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಲವು ವರ್ಷಗಳಿಂದ ಶಾಂತಿಯುತವಾಗಿದ್ದ ಭಟ್ಕಳದಲ್ಲಿ ಗಲಭೆಕೋರರಿಗೆ ಪ್ರಚೋದನೆ ಸಿಗುತ್ತಿರುವುದು ಆತಂಕಕಾರಿ’ ಎಂದರು. ‘ನಡೆದ ಎಲ್ಲಾ ದುರ್ಘಟನೆಗೆ ಕಾಂಗ್ರೆಸ್ ಸರ್ಕಾರವೇ ಸಂಪೂರ್ಣ ಹೊಣೆ’ ಎಂದು ದೂರಿದರು. ‘ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣವೇ ಅಶಾಂತಿಗೆ ಕಾರಣವಾಗಿದೆ’ ಎಂದು ಆರೋಪಿಸಿದರು.
‘ಸಾವಿರಾರು ಜನರು ಸೇರಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವುದು ಖಂಡನೀಯ’ ಎಂದರು. ‘ಮುರಿನಕಟ್ಟೆ ಮರುಸ್ಥಾಪನೆಗೆ ಆಗ್ರಹಿಸಿ ಮೇ 29ರಂದು ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಲಿದೆ’ ಎಂದು ತಿಳಿಸಿದರು. ‘ಯಲ್ಲಾಪುರದಿಂದಲೂ ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಭಟ್ಕಳದ ಹಿಂದೂ ಸಮಾಜದ ಧ್ವನಿಯಾಗುತ್ತೇವೆ’ ಎಂದು ಹೇಳಿದರು.
ಹಿರಿಯ ಮುಖಂಡ ರಾಮು ನಾಯ್ಕ ಮಾತನಾಡಿ ‘ಭಟ್ಕಳದಲ್ಲಿ ಹಿಂದೂಗಳ ಧಾರ್ಮಿಕ ಸ್ಥಳವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿ ಶಾಂತಿಯುತ ವಾತಾವರಣಕ್ಕೆ ಧಕ್ಕೆ ತಂದಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಸಂದರ್ಭದಲ್ಲೇ ಮುರಿನಕಟ್ಟೆ ಸ್ಥಳಾಂತರವಾಗಿತ್ತು. ಇದರಿಂದ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ. ಆದರೆ ಈ ಘಟನೆಗಳ ಹಿಂದೆ ದುಷ್ಟ ಉದ್ದೇಶ ಕಾರ್ಯನಿರ್ವಹಿಸುತ್ತಿದೆ’ ಎಂದು ಆರೋಪಿಸಿದರು. ಶ್ಯಾಮಿಲಿ ಪಾಠಣಕರ ಅವರು ಘಟನೆಯನ್ನು ಖಂಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸೋಮು ನಾಯ್ಕ, ರಜತ್ ಬದ್ದಿ, ಕೆ.ಟಿ. ಹೆಗಡೆ, ಗಣೇಶ ಪಾಠಣಕರ ಹಾಗೂ ಶಿವಲಿಂಗಯ್ಯ ಎಸ್ ಅಲ್ಲಯ್ಯನಮಠ ಇದ್ದರು.