ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಖಂಡಿಸಿ ಕಾರವಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ಟೈಯರಿಗೆ ಬೆಂಕಿ ಹಚ್ಚಿ ಸಂಸದರ ಕಚೇರಿ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿದ್ದ ಗೇಟ್ ಏರಿ ಸಂಸದರ ಕಚೇರಿ ಒಳಗೆ ನುಗ್ಗುವ ಪ್ರಯತ್ನ ಮಾಡಿದರು. ಮೊದಲು ಶಾಂತವಾಗಿಯೇ ಇದ್ದ ಪ್ರತಿಭಟನೆ ನಂತರ ಮತ್ತೊಂದು ಸ್ವರೂಪಪಡೆದಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನ ಮಾಡಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯವಾಗಿಯೂ ಕಾಂಗ್ರೆಸ್ಸಿಗರು ಈ ವೇಳೆ ಆಕ್ರೋಶವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಕೆಲವರು ಟೈರ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಪ್ರಯತ್ನ ಮಾಡಿದರು. ಪೊಲೀಸರು ತಕ್ಷಣ ಆ ಟೈಯರನ್ನು ಕಸಿದುಕೊಂಡರು. `ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ದರ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು. ಉತ್ತರ ಕನ್ನಡ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮೋದ್ ಸಿರ್ಸಿಕರ್, ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕಲ್ಗುಟ್ಕರ್, ಪ್ರಮುಖರಾದ ಬಾಬು ಶೇಖ್, ಸೂರಜ್ ಕುರ್ಮಕರ್, ಸಿದ್ದಾರ್ಥ ನಾಯ್ಕ, ಕುಮಟಾದ ಯುವ ಕಾಂಗ್ರೆಸ್ ಅಧ್ಯಕ್ಷ ವೈಭವ್ ನಾಯ್ಕ್, ಶಿರಸಿಯ ಯೋಗಾನಂದ, ಸಂದೇಶ, ನಿಖಿಲ್ ಮಂಕಿ, ತೇಜಸ್ ಭಟ್ಕಳ ಅವರು ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.