`ಅಂಕೋಲಾದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ ಅವರ ಕೊಲೆ ಪ್ರಯತ್ನ ಪ್ರಕರಣದ ದಿಕ್ಕು ತಪ್ಪಿಸಲು ನ್ಯಾಯವಾದಿ ನಾಗರಾಜ ನಾಯಕ ಅವರು ಹೋರಾಟದ ಮುಖವಾಡ ಧರಿಸಿದ್ದಾರೆ’ ಎಂದು ಗೋಪಾಲಕೃಷ್ಣ ನಾಯಕ ಅವರ ಬೆಂಬಲಿಗರು ಹೇಳಿದ್ದಾರೆ. ಗೋಪಾಲಕೃಷ್ಣ ನಾಯಕ ಅವರು ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.
`ಕೊಲೆ ಯತ್ನ ಪ್ರಕರಣವನ್ನು ದಿಕ್ಕು ತಪ್ಪಿಸುವ ಉದ್ದೇಶದಿಂದ ನಾಗರಾಜ ನಾಯಕ ಅವರು ಸುಳ್ಳು ಆರೋಪ ಶುರು ಮಾಡಿದ್ದಾರೆ. ಸಾರ್ವಜನಿಕರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಈ ಹೋರಾಟದ ಹಿಂದಿದೆ’ ಎಂದು ಗೋಪಾಲಕೃಷ್ಣ ನಾಯಕ ಅವರು ಹೇಳಿದ್ದಾರೆ. `ವಂದಿಗೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಕ್ಕೆ ನಾಗರಾಜ ನಾಯಕರಿಗೆ ಆಹ್ವಾನವಿರಲಿಲ್ಲ. ಆದರೂ, ಅವರು ಅಲ್ಲಿಗೆ ಆಗಮಿಸಿದ್ದಾಗ ಕೆಲವು ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಗ ವಾಗ್ವಾದ ನಡೆದಿದ್ದು, ಅದನ್ನೇ ಕೊಲೆ ಬೆದರಿಕೆ ಎಂದು ಬಿಂಬಿಸಿ ದೂರು ಕೊಡಲಾಗಿದೆ. ದೂರು ದಾಖಲಾದ ನಂತರವೂ ಪ್ರತಿಭಟನೆ ನಡೆಸಿರುವುದು ವಿಷಯದ ದಿಕ್ಕು ಬದಲಿಸುವ ತಂತ್ರ’ ಎಂದು ದೂರಿದರು.
`ಧರಣಿ ವೇಳೆ ನಾಗರಾಜ ನಾಯಕರು ತಹಶೀಲ್ದಾರ್ ಕಚೇರಿ ಬಳಿಯ ಗೋಡೆ ಗಣಪತಿಯ ಮೇಲೆ ಆಣೆ ಮಾಡುವಂತೆ ಸವಾಲು ಹಾಕಿದ್ದರು. ಆ ಸವಾಲನ್ನು ಸ್ವೀಕರಿಸಿ ಅಂದೇ ರಾತ್ರಿ ದೇವರ ಮುಂದೆ ಹೋಗಿ ಈ ಪ್ರಕರಣದಲ್ಲಿ ನನ್ನ ಯಾವುದೇ ಕುಮ್ಮಕ್ಕಿಲ್ಲ ಎಂದು ಆಣೆ ಮಾಡಿ ಬಂದಿದ್ದೇನೆ’ ಎಂದು ಸ್ಪಷ್ಟಪಡಿಸಿದರು. `ನಾನು ಊರಿನಲ್ಲಿ ಇಲ್ಲದಿದ್ದರೂ ನನ್ನ ಪ್ರಭಾವವಿದೆ ಎಂದು ಸುಳ್ಳು ದೂರು ನೀಡಲಾಗಿದೆ. ನನ್ನ ಮೇಲೆ ಹತ್ಯೆ ಯತ್ನ ನಡೆಸಿದ ನಿಜವಾದ ಆರೋಪಿಗಳ ಬಂಧನಕ್ಕೆ ಆಗ್ರಹಿಸುವುದನ್ನು ಬಿಟ್ಟು ನಾರಾಯಣ ನಾಯಕ ಹಾಗೂ ವಂದಿಗೆ ಸೊಸೈಟಿ ಅಧ್ಯಕ್ಷ ಸೂರಜ್ ನಾಯಕ ಅವರಂತಹ ಗೌರವಾನ್ವಿತರ ಮೇಲೆ ದೂರು ನೀಡಿ ಗೊಂದಲ ಸೃಷ್ಠಿಸಲಾಗಿದೆ’ ಎಂದು ಆರೋಪಿಸಿದರು. `ಸ್ನೇಹಿತರ ಮೇಲೆ ಸುಳ್ಳು ದೂರು ದಾಖಲಾದ ಕಾರಣ ನಾನು ಅವರ ಬೆಂಬಲಕ್ಕೆ ಬಂದಿದ್ದೇನೆ’ ಎಂದರು.
`ನನ್ನ ಮೇಲೆ ನಡೆದ ಕೊಲೆ ಯತ್ನದ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸದಿರುವುದು ನೋವು ತಂದಿದೆ. ಆದರೂ ಪೊಲೀಸ್ ಇಲಾಖೆಯ ಮೇಲೆ ನನಗೆ ನಂಬಿಕೆಯಿದೆ’ ಎಂದರು. ನಗರಸಭೆ ಮಾಜಿ ಸದಸ್ಯ ರಾಜೇಶ್ ಮಾಜಾಳಿಕರ್, ವಂದಿಗೆ ಗ್ರಾ ಪಂ ಮಾಜಿ ಅಧ್ಯಕ್ಷ ನಾರಾಯಣ ನಾಯಕ, ಕಿಶೋರ್, ವಿಶಾಲ್, ಸೂರಜ್ ನಾಯಕ, ಪ್ರೀತಮ್ ನಾಯಕ ಇದ್ದರು.