ಭಟ್ಕಳದ ಬಳಿ ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿ ಅಕ್ರಮ ಗೋ ಸಾಗಾಟ ನಡೆದಿದ್ದು, ಅರಣ್ಯ ಸಿಬ್ಬಂದಿ ನೋಡಿದ ಕಳ್ಳರು ಅವರನ್ನೇ ಪೊಲೀಸರೆಂದು ಭಾವಿಸಿ ಕಾರು ಬಿಟ್ಟು ಅಲ್ಲಿಂದ ಓಡಿದ್ದಾರೆ. ಅದಾದ ನಂತರ ಆ ಅರಣ್ಯ ಸಿಬ್ಬಂದಿ ಗೋವುಗಳ ಆರೈಕೆ ಮಾಡಿದ್ದಾರೆ.
ಭಟ್ಕಳದಲ್ಲಿ ಈಚೆಗೆ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಗೋ ಸಾಗಾಟ ನಡೆಯುತ್ತಿದೆ. ಅದರಂತೆ, ಸೋಮವಾರವೂ ಐಷಾರಾಮಿ ಕಾರಿನಲ್ಲಿ ಬಂದ ಕಳ್ಳರು ಗೋ ಕಳ್ಳತನ ಮಾಡಿದ್ದಾರೆ. ಹಾಡುವಳ್ಳಿ ಗ್ರಾಮದ ಹಲ್ಯಾಣಿ ಬಳಿ ಬಂದ ಆ ಕಳ್ಳರಿಗೆ ಎದುರಿಗೆ ಅರಣ್ಯ ಇಲಾಖೆಯವರ ಜೀಪು ಕಾಣಿಸಿದೆ. ಪೊಲೀಸರ ಜೀಪು ಎಂದು ಭಾವಿಸಿದ ಆ ಕಳ್ಳರು ಕಾರನ್ನು ಅಲ್ಲಿಯೇ ಬಿಟ್ಟು ಕಾಡಿನ ಕಡೆ ಓಡಿದ್ದಾರೆ. ಅನುಮಾನಾಸ್ಪದ ರೀತಿ ವರ್ತಿಸಿದವರ ಕಾರನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದಾರೆ. ಆಗ, ಅಲ್ಲಿ ಅಕ್ರಮ ಗೋ ಸಾಗಾಟ ನಡೆದಿರುವುದು ಗೊತ್ತಾಗಿದೆ.
ವಧೆ ಮಾಡಿ ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಆರೋಪಿತರು ಮಾರುತಿ ಸುಜುಕಿ ಬಲೆನೋ ಕಾರಿನಲ್ಲಿ ಸುಮಾರು 1.03 ಲಕ್ಷ ರೂ. ಮೌಲ್ಯದ ಜಾನುವಾರುಗಳನ್ನು ಸಾಗಿಸುತ್ತಿದ್ದರು. ಇದಕ್ಕೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಲಾಗಿತ್ತು. ಹುಲ್ಲು-ನೀರು ಕೊಡದೇ ಸಾಗಿಸಲಾಗುತ್ತಿತ್ತು. ಅರಣ್ಯ ಸಿಬ್ಬಂದಿ ಅದನ್ನು ತಡೆ ಹಿಡಿದು ಜಾನುವಾರುಗಳಿಗೆ ಮರು ಜನ್ಮ ನೀಡಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪಿಎಸೈ ಮಲ್ಲಿಕಾರ್ಜುನಯ್ಯ ಕೊರಾಣಿ ಪ್ರಕರಣ ದಾಖಲಿಸಿದ್ದು, ಗೋ ಕಳ್ಳತನದ ರೂವಾರಿಗಳ ಹುಡುಕಾಟ ನಡೆಸಿದ್ದಾರೆ.