ಕಳೆದ ಮೂರು ವರ್ಷದ ಅಡಿಕೆ ವಹಿವಾಟು ವೀಕ್ಷಿಸಿದರೆ ಮೇ ಅಂತ್ಯ ಹಾಗೂ ಜೂನ್ ಮೊದಲ ವಾರ ಅಡಿಕೆಗೆ ಹೆಚ್ಚಿನ ದರ ಸಿಕ್ಕಿದೆ. ಆದರೆ, ಈ ಬಾರಿಯೂ ಹಾಗೇ ಆಗುತ್ತದೆ ಎಂದು ಖಚಿತವಾಗಿ ಹೇಳುವ ಹಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಶೇ 40ರಷ್ಟು ಅಡಿಕೆ ಇಳುವರಿ ಕಡಿಮೆಯಾಗಿದ್ದರೂ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಸಾವಿರ ಲೆಕ್ಕದಲ್ಲಿ ಅಡಿಕೆ ದರ ಕಡಿಮೆಯಾಗಿದೆ. ಜೊತೆಗೆ ವಿದೇಶಿ ಅಡಿಕೆಯೂ ಆಮದಾಗುತ್ತಿದೆ. ಅಡಿಕೆ ವ್ಯಾಪಾರದ ಮೇಲೆ ಯುದ್ಧದ ಪರಿಣಾಮವೂ ಬಿದ್ದಿದೆ. ಇದೇ ಅಡಿಕೆ ದರ ಇಳಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗಿದೆ.
ಅಡಿಕೆ ದರ ಕುಸಿತದ ಕಾರಣ ರೈತರು ಆತಂಕಪಡಬೇಕಾಗಿಲ್ಲ. ಅಡಿಕೆ ಗುಣಮಟ್ಟ ಹಾಗೂ ಬೇಡಿಕೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಏರಿಳಿತ ಸಾಮಾನ್ಯವಾಗಿದ್ದರೂ ರೈತರು ಜಾಣ್ಮೆಯಿಂದ ವ್ಯವಹಾರ ಮಾಡುವುದು ಮುಖ್ಯ. ಬಹಳದಿನ ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗದ ಕೊಳೆ, ಒಡಕು ಇನ್ನಿತರ ಅಡಿಕೆಗಳನ್ನು ಆಗಿದ್ದಾಂಗ ಮಾರಾಟ ಮಾಡುವುದು ಬುದ್ದಿವಂತಿಕೆಯ ಲಕ್ಷಣ. ಒಂದೆರಡು ತಿಂಗಳ ನಂತರ ಅಡಿಕೆ ದರ ಮತ್ತೆ ಏರಿಕೆ ಕಾಣುವ ಸಾಧ್ಯತೆಯಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಈಗಿರುವ ದರ ದಿಢೀರ್ ಆಗಿ ಕುಸಿತದ ಸಾಧ್ಯತೆಗಳಿಲ್ಲ. ಹೀಗಾಗಿ ಎಲ್ಲಾ ಅಡಿಕೆಯನ್ನು ಒಟ್ಟಿಗೆ ಮಾರಾಟ ಮಾಡುವ ಬದಲು ಹಣದ ಅಗತ್ಯಕ್ಕೆ ಅನುಗುಣವಾಗಿ ಅಷ್ಟಷ್ಟೇ ಮಾರಾಟ ಮಾಡುವುದು ಸೂಕ್ತ ಎಂಬುದು ತಜ್ಞರ ಅಭಿಮತ.
ಮಂಗಳೂರಿನ ಅಡಿಕೆಯ ಸ್ವಾದ ಹಾಗೂ ರುಚಿ ಹೆಚ್ಚಿದ್ದರಿಂದ ಅಲ್ಲಿನ ಅಡಿಕೆಗೆ ಹೆಚ್ಚಿನ ಬೇಡಿಕೆಯಿದ್ದು, ಆ ಗುಣಮಟ್ಟದಲ್ಲಿ ಉತ್ತರ ಕನ್ನಡದ ಅಡಿಕೆ ಬರುತ್ತಿಲ್ಲ. ಹೀಗಾಗಿ ಸಾಮಾನ್ಯವಾಗಿ ಅಲ್ಲಿನ ದರ ಇಲ್ಲಿ ಸಿಗುತ್ತಿಲ್ಲ. ಅದಾಗಿಯೂ ಯಲ್ಲಾಪುರ, ಶಿರಸಿ, ಸಿದ್ದಾಪುರ ಹಾಗೂ ಕುಮಟಾ ಮಾರುಕಟ್ಟೆ ಗಮನಿಸಿದಾಗ ಗುಣಮಟ್ಟದ ಉತ್ತಮ ದರ್ಜೆಯ ಅಡಿಕೆಗೆ ಉತ್ತಮ ದರವೇ ಸಿಗುತ್ತಿದೆ. `ಸಾಲ ಮಾಡಿ ಬಡ್ಡಿ ತುಂಬುವ ಅಡಿಕೆ ಬೆಳೆಗಾರರು ಹೆಚ್ಚು ದಿನ ಕಾಯದೇ ಅಡಿಕೆ ಮಾರಾಟ ಮಾಡುವುದು ಉತ್ತಮ. ಸಾಲದ ಚಿಂತೆ ಇಲ್ಲದವರು ಅಡಿಕೆ ಗುಣಮಟ್ಟ ಕಾಯ್ದುಕೊಂಡು ಅದನ್ನು ಹಂತ ಹಂತವಾಗಿ ಮಾರಾಟ ಮಾಡಿದರೆ ಉತ್ತಮ ದರಪಡೆಯಲು ಸಾಧ್ಯ’ ಎಂಬುದು ಯಲ್ಲಾಪುರ ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಎಚ್ ಹೆಗಡೆ ಅವರ ಮಾತು.
`ಈ ಬಾರಿ ಬೆಳೆ ತಡವಾದ ಕಾರಣ ಕೆಂಪಡಿಕೆ ಹೆಚ್ಚಿನ ಪ್ರಮಾಣದಲ್ಲಿದೆ. ಬಯಲು ಸೀಮೆಯವರು ಸಹ ದೊಡ್ಡ ಪ್ರಮಾಣದಲ್ಲಿ ಕೆಂಪಡಿಕೆ ಮಾಡಿದ್ದಾರೆ. ಹೀಗಾಗಿ ಅಡಿಕೆ ಬೆಳೆಯ ಇಳುವರಿ ಕಡಿಮೆ ಆಗಿದ್ದರೂ ಕೆಂಪಡಿಕೆ ಸಾಕಷ್ಟು ಪ್ರಮಾಣದಲ್ಲಿದೆ’ ಎಂದು ಅವರು ವಿವರಿಸಿದ್ದಾರೆ. `ಗುಣಮಟ್ಟದ ಅಡಿಕೆಗೆ ಉತ್ತಮ ದರವಿದೆ. ಶೇ 80ರಷ್ಟು ಅಡಿಕೆವಹಿವಾಟು ಗುಟಕಾ ಕಂಪನಿಗಳ ಮೇಲೆ ನಿರ್ಧಾರವಾಗಿದ್ದು, ಉತ್ತರ ಭಾರತದಲ್ಲಿನ ಹಬ್ಬ-ಹರಿದಿನಗಳು ಸಹ ಇಲ್ಲಿನ ವ್ಯಾಪಾರದ ಮೇಲೆ ಪ್ರಭಾವ ಬೀರುತ್ತದೆ’ ಎಂದವರು ವಿವರಿಸಿದರು.