ಕಂಠಪೂರ್ತಿ ಕುಡಿದ ಕಟ್ಟಡ ಕಾರ್ಮಿಕರ ನಡುವೆ ಕಾರವಾರದಲ್ಲಿ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಒಬ್ಬರ ಜೀವ ಹೋಗಿದೆ. ಅಸ್ನೋಟಿಯಲ್ಲಿ ನಡೆದ ಮಾರಾಮಾರಿಯಲ್ಲಿ ದುಡಿಯಲು ಬಂದಿದ್ದ ಕಾರ್ಮಿಕರೊಬ್ಬರು ಕೊಲೆಯಾಗಿದ್ದಾರೆ.
ಬಾಗಲಕೋಟೆಯ ಶಿರೂರಿನ ಶಿವಾನಂದ ನಾಯ್ಕರ್ (45) ಹಾಗೂ ಹಾವೇರಿ ಸವಣೂರಿನ ಮರಿಯಪ್ಪಾ ಹರಿಜನ್ (43) ಸೇರಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಗುಜರಾತಿನ ದೇವೇಶ್ ರಾತೋಡ್ (28) ಅವರನ್ನು ಕೊಲೆ ಮಾಡಿದ್ದಾರೆ. ಈ ಮೂವರು ಕಾರ್ಮಿಕರು ನಿವೃತ್ತ ನೌಕರ ಕಮಲಾಕರ ಗಡಕರ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಅವರು ಅಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಎಲ್ಲರೂ ಒಟ್ಟಿಗೆ ದುಡಿಯುತ್ತಿದ್ದು, ಸರಾಯಿ ಕುಡಿದ ನಶೆಯಲ್ಲಿ ಶುರುವಾದ ಸಣ್ಣ ಜಗಳ ಕೊಲೆಯಲ್ಲಿ ಕೊನೆಯಾಗಿದೆ.
ದೇವೇಶ್ ರಾತೋಡ್ ಅವರ ಸಾವಿನ ಸುದ್ದಿ ಕೇಳಿದ ತಕ್ಷಣ ಪೊಲೀಸರು ಅಲ್ಲಿಗೆ ದೌಡಾಯಿಸಿದ್ದಾರೆ. ಕೊಲೆ ನಂತರವೂ ನಶೆಯಲ್ಲಿಯೇ ಮುಳಗಿದ್ದ ಶಿವಾನಂದ ನಾಯ್ಕರ್ (45) ಹಾಗೂ ಮರಿಯಪ್ಪಾ ಹರಿಜನ್ ಅವರನ್ನು ಬಂಧಿಸಿದ್ದಾರೆ. ಶಿವಾನಂದ ನಾಯ್ಕರ್ ಹಾಗೂ ಮರಿಯಪ್ಪಾ ಹರಿಜನ್ ಅವರು ದೇವೇಶ್ ರಾತೋಡ್ ಅವರಿಗೆ ಹಿಗ್ಗಾಮುಗ್ಗ ಥಳಿಸಿ ಅವರನ್ನು ಹೊಡೆದು ಸಾಯಿಸಿರುವುದು ವಿಚಾರಣೆ ವೇಳೆ ಖಚಿತವಾಗಿದೆ. ಚಿತ್ತಾಕುಲ ಪೊಲೀಸರು ಆರೋಪಿತರಿಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಜರುಗಿಸಿದ್ದಾರೆ.