ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಎಲ್ಲಾ ಬಗೆಯ ಸಿದ್ಧತೆ ಜೋರಾಗಿದ್ದು, ಅಲ್ಲಿಗೆ ಸರಬರಾಜಾಗುವ ಯಂತ್ರೋಪಕರಣಗಳು ಜನರ ನಿದ್ದೆ ಹಾಳು ಮಾಡಿವೆ. ಯಂತ್ರೋಪಕರಣಗಳ ಅಬ್ಬರಕ್ಕೆ ಕಾರವಾರ-ಕೈಗಾ ರಸ್ತೆಯಂಚಿನ ಜನ ಹೈರಣಾಗುತ್ತಿದ್ದಾರೆ.
ಈ ಬಗ್ಗೆ ಹಿರಿಯ ಪತ್ರಕರ್ತ ಹಾಗೂ ಅಂಕಣಕಾರ ಶ್ರೀನಾಥ್ ಜೋಶಿ ಅವರು ಜಿಲ್ಲಾಡಳಿತ ಮತ್ತು ಕೈಗಾ ಯೋಜನಾ ಮಂಡಳಿಗೆ ಕಾನೂನುಬದ್ಧ ದೂರು ಸಲ್ಲಿಸಿ ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. `ಅಭಿವೃದ್ಧಿಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. `ಪ್ರತಿದಿನ ಸಂಜೆ 7 ಗಂಟೆಯಿAದ ಬೆಳಗಿನ 6 ಗಂಟೆಯವರೆಗೆ ಜಲ್ಲಿ, ಮರಳು ಮತ್ತು ಎಂ-ಸ್ಯಾAಡ್ ಸಾಗಿಸುವ ನೂರಾರು ಡಂಪರ್‌ಗಳು ಅತಿ ವೇಗವಾಗಿ ಮತ್ತು ನಿಗದಿತ ಮಿತಿಗಿಂತ ಹೆಚ್ಚಿನ ತೂಕ ಹೊತ್ತು ಸಂಚರಿಸುತ್ತಿವೆ. ಈ ರಾಕ್ಷಸೀ ಸಂಚಾರದಿAದಾಗಿ ರಾತ್ರಿ ಪಾಳಿ ಮುಗಿಸಿ ಬರುವ ಕೆಲಸಗಾರರು, ಬೆಳಗಿನ ಜಾವ ರೈಲಿಗೆ ಹೋಗುವ ಪ್ರಯಾಣಿಕರು ಹಾಗೂ ತುರ್ತು ಚಿಕಿತ್ಸೆಗೆ ಹೋಗಬೇಕಾದ ರೋಗಿಗಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ. ವೇಗವಾಗಿ ಧಾವಿಸುವ ಈ ವಾಹನಗಳು ರಸ್ತೆ ಬದಿಯಲ್ಲಿರುವ ದನಕರುಗಳ ಪ್ರಾಣಕ್ಕೆ ಕಂಟಕವಾಗುವುದರ ಜೊತೆಗೆ, ಪಶ್ಚಿಮ ಘಟ್ಟದ ಸೂಕ್ಷ್ಮ ವಲಯದ ಅಪರೂಪದ ವನ್ಯಜೀವಿಗಳ ಜೀವಕ್ಕೂ ಸಂಚಕಾರ ತಂದಿವೆ’ ಎಂದವರು ವಿವರಿಸಿದ್ದಾರೆ.
ಈಚೆಗೆ ಗುಜರಾತ್‌ನಿಂದ ಬಂದ ಭೀಮಕಾಯದ ಯಂತ್ರವೊAದು ತಿಂಗಳುಗಟ್ಟಲೆ ಸಂಚಾರ ಸ್ಥಗಿತಗೊಳಿಸಿ ಅಂತಿಮವಾಗಿ ಉರುಳಿ ಬಿದ್ದ ಘಟನೆಯನ್ನು ಪ್ರಸ್ತಾಪಿಸಿರುವ ಜೋಶಿ ಅವರು `ಈ ಸಾಗಾಟಕ್ಕಾಗಿ ವಿದ್ಯುತ್ ಲೈನ್‌ಗಳನ್ನು ಪದೆ ಪದೆ ತೆರವುಗೊಳಿಸಿದ ಕಾರಣ ಹಳ್ಳಿಗಳು ಕತ್ತಲಲ್ಲಿ ಕಳೆಯುವಂತಾಯಿತು. ಇದರಿಂದ ಮದುವೆ ದಿಬ್ಬಣಗಳು ಹಾಗೂ ಸ್ಥಳೀಯ ಜಾತ್ರೆ-ಬಂಡಿ ಹಬ್ಬಗಳಿಗೆ ತೀವ್ರ ಅಡ್ಡಿಯಾಯಿತು’ ಎಂದು ಹೇಳಿದ್ದಾರೆ. `ಮುಖ್ಯ ರಸ್ತೆಯನ್ನು ಬಿಟ್ಟು ಸಕಲ್‌ವಾಡಾದಿಂದ ಕರ್ಕಲ್ ಮಾರ್ಗವಾಗಿ ಕೆರವಡಿಯ ಒಳರಸ್ತೆಗಳಲ್ಲಿ ಭಾರಿ ವಾಹನಗಳನ್ನು ಸಾಗಿಸುತ್ತಿರುವುದು ಅಲ್ಲಿನ ಹಳೆಯ ಸೇತುವೆಗಳ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಈಗಾಗಲೇ ಕೆರವಡಿಯಿಂದ ಮಲ್ಲಾಪುರದವರೆಗೆ ರಸ್ತೆಯು ಸಂಪೂರ್ಣವಾಗಿ ಕಿತ್ತುಹೋಗಿದ್ದು, ಮುಂಬರುವ ಮಳೆಗಾಲದಲ್ಲಿ ಈ ಭಾಗದ ಸಾರಿಗೆ ಸಂಪರ್ಕ ಕಡಿತಗೊಳ್ಳುವ ಆತಂಕ ಎದುರಾಗಿದೆ’ ಎಂದು ಅವರು ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ.
`ಈ ಕೂಡಲೇ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ವಾಹನಗಳ ತೂಕ ಪರಿಶೀಲನೆ ನಡೆಸಬೇಕು. ವೇಗಕ್ಕೆ ಕಟ್ಟುನಿಟ್ಟಿನ ಮಿತಿ ಹೇರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ. `ಕೈಗಾ ಮಂಡಳಿಯು ಹದಗೆಟ್ಟ ರಸ್ತೆಗಳ ದುರಸ್ತಿಗೆ ತುರ್ತು ನಿಧಿ ಮೀಸಲಿಡಬೇಕು ಮತ್ತು ಪ್ರತಿ ಹಳ್ಳಿಯಲ್ಲಿ ಸಂಚಾರ ನಿಯಂತ್ರಿಸಲು ಟ್ರಾಫಿಕ್ ಮಾರ್ಷಲ್‌ಗಳನ್ನು ನೇಮಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ. ಒಂದು ವೇಳೆ ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಸಿದ್ದರ ಮತ್ತು ಸುತ್ತಮುತ್ತಲ ಗ್ರಾಮಸ್ಥರೊಂದಿಗೆ ಸೇರಿ ಕಾನೂನುಬದ್ಧವಾಗಿ ಉಗ್ರವಾದ ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಶ್ರೀನಾಥ್ ಜೋಶಿ ಅವರು ಎಚ್ಚರಿಸಿದ್ದಾರೆ.