`ಅoಕೋಲಾದ ವಂದಿಗೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಕ್ಕೆ ನ್ಯಾಯವಾದಿ ನಾಗರಾಜ ನಾಯಕ ಅವರಿಗೆ ಆಮಂತ್ರಣವೇ ಇರಲಿಲ್ಲ’ ಎಂದು ಕಾಂಗ್ರೆಸ್ ನಾಯಕ ಗೋಪಾಲಕೃಷ್ಣ ನಾಯಕ ಅವರು ಹೇಳಿದ್ದು, ವಂದಿಗೆ ಗ್ರಾಮದ ಜನ ಇದನ್ನು ಅಲ್ಲಗಳೆದಿದ್ದಾರೆ. `ನಾವು ಆಮಂತ್ರಿಸಿದ ಕಾರಣಕ್ಕಾಗಿಯೇ ನಾಗರಾಜ ನಾಯಕ ಅವರು ಆಗಮಿಸಿದ್ದರು’ ಎಂದು ಆ ಭಾಗದ ಜನ ಪೊಲೀಸರಿಗೆ ಸಮಜಾಯಿಶೀ ಕೊಟ್ಟಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಗೋಪಾಲಕೃಷ್ಣ ನಾಯಕ ಅವರು `ಯಕ್ಷಗಾನ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಕರೆಯದಿರಲು ಜನ ನಿರ್ಧರಿಸಿದ್ದರು. ಆದರೆ, ಆಮಂತ್ರಣ ಇಲ್ಲದಿದ್ದರೂ ನಾಗರಾಜ ನಾಯಕ ಅವರು ಅಲ್ಲಿಗೆ ಹೋಗಿದ್ದ ಕಾರಣ ವಾಗ್ವಾದ ನಡೆದಿತ್ತು’ ಎಂದು ಹೇಳಿದ್ದರು. ಆದರೆ, `ಮೇ 6ರಂದು ವಂದಿಗೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಗರಾಜ ನಾಯಕರನ್ನು ಊರಿನ ಸಂಘಟಕರಾದ ನಾವೇ ಆಹ್ವಾನಿಸಿದ್ದೇವೆಯೇ ಹೊರತು ಅವರಾಗಿಯೇ ಬಂದಿಲ್ಲ’ ಎಂದು ವಂದಿಗೆ ಗ್ರಾಮಸ್ಥರು ಹೇಳಿದ್ದಾರೆ.
`ಮೇ 6 ರಂದು ದಿವಂಗತರಾದ 65 ಕಲಾವಿದರ ನೆನಪಿನಲ್ಲಿ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿದ್ದು ಆ ಕಾರ್ಯಕ್ರಮದ ಉದ್ಘಾಟನೆಗೆ ಯಕ್ಷಗಾನದ ಕಲಾವಿದರನ್ನು ಕರೆಯಬೇಕೆಂದು ನಾವೇ ನಿರ್ಧರಿಸಿದ್ದೇವು. ಆ ಪ್ರಕಾರ ಶಿವಾನಂದ ನಾಯಕ, ನ್ಯಾಯವಾದಿ ನಾಗರಾಜ ನಾಯಕ ಮತ್ತು ಬೊಮ್ಮಯ್ಯ ಗಾಂವಕರ ಅವರನ್ನು ಆಹ್ವಾನಿಸಿದ್ದೆವು. ಅದಕ್ಕೆ ಪೂರ್ವದಲ್ಲಿಯೇ ಈ ಅತಿಥಿಗಳನ್ನು ಕರೆಯುವುದು ಎಂದು ಸಂಘಟಕರು ನಿರ್ಧಾರ ಮಾಡಿ ನಾಗರಾಜ ನಾಯಕರಿಗೆ ಆಹ್ವಾನ ನೀಡುವ ಜವಾಬ್ದಾರಿಯನ್ನು ಗ್ರಾಮದ ಗಣಪತಿ ವಿಠೋಬ ನಾಯಕರಿಗೆ ನೀಡಲಾಗಿತ್ತು’ ಎಂದವರು ಹೇಳಿದ್ದಾರೆ.
ಈ ಮಧ್ಯದಲ್ಲಿ ಸಂಘಟನೆಯ ನಿರ್ಧಾರವಾದ ನಂತರ ಮಂಜುನಾಥ ಗಣಪತಿ ನಾಯಕ, ನಾರಾಯಣ ಹರೀಶ ನಾಯಕ ಮತ್ತು ಸೂರಜ ಹಮ್ಮಣ್ಣ ನಾಯಕ ಬಂದು ಮೊದಲು ನಾಗರಾಜ ನಾಯಕರನ್ನು ಕರೆಯುವುದೇ ಬೇಡ ಎಂದು ಹೇಳಿದ್ದರು. ಆಮೇಲೆ ನಾಗರಾಜ ನಾಯಕರನ್ನು ಕರೆದರೆ ಗೋಪಾಲಕೃಷ್ಣ ನಾಯಕರನ್ನು ಕರೆಯಬೇಕಾಗುತ್ತದೆ ಎಂದು ಇಲ್ಲವಾದಲ್ಲಿ ಸಮಸ್ಯೆಯಾಗಲಿದೆ’ ಎಂದಿದ್ದರು. ಸಂಘಟನೆಯವರಾದ ನಾವೆಲ್ಲ ತೆಗೆದುಕೊಂಡ ನಿರ್ಧಾರವನ್ನು ಹಿಂಪಡೆಯುವುದಿಲ್ಲ ಎಂದು ನಾಗರಾಜ ನಾಯಕರಿಗೆ ಗಣಪತಿ ನಾಯಕರ ಮುಖಾಂತರ ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು’ ಎಂಬ ವಿಷಯವನ್ನು ಹೇಳಿದ್ದಾರೆ.