ಭಟ್ಕಳದ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳು ಶುಕ್ರವಾರ ಮಧ್ಯಾಹ್ನ ಸ್ವಯಂ ಪ್ರೇರಿತ ಬಂದ್ ನಡೆದಿದೆ. ಜೊತೆಗೆ, ಭಾರೀ ಪ್ರಮಾಣದ ಜನ ಬೆಂಬಲದಿoದ ಪ್ರತಿಭಟನೆಯನ್ನು ನಡೆಸಿವೆ.
ಭಟ್ಕಳದಲ್ಲಿ ಭದ್ರತೆ ದೃಷ್ಟಿಯಿಂದ 900ಕ್ಕೂ ಅಧಿಕ ಪೊಲೀಸರನ್ನು ನೇಮಿಸಲಾಗಿದೆ. ಇದರ ಜೊತೆಗೆ ಪರಿಸ್ಥಿತಿಯನ್ನು ನಿಭಾಯಿಸಲು 5 ಕೆಎಸ್ಆರ್ಪಿ ಹಾಗೂ 2 ಡಿಆರ್ ತುಕಡಿಗಳನ್ನು ಭದ್ರತಾ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಉಡುಪಿ ಮತ್ತು ಭಟ್ಕಳ ಗಡಿ ಭಾಗದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಿಶೇಷ ಚೆಕ್ಪೋಸ್ಟ್ ಸ್ಥಾಪಿಸಲಾಗಿದ್ದು, ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ 6 ರ ಮುರಿನಕಟ್ಟೆ ಪ್ರದೇಶದ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಭಾಯಿಸಲಾಗುತ್ತಿದೆ.
ಚನ್ನಪಟ್ಟಣ ಹನುಮದೇವಾಲಯದಿಂದ ಪ್ರತಿಭಟನೆ ಶುರುವಾಗಿ ಉಪವಿಭಾಗಾಧಿಕಾರಿ ಕಚೇರಿವರೆಗೆ ಸಂಚರಿಸಿದೆ. ಅದಾದ ನಂತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಪತ್ರ ರವಾನೆಯಾಗಿದೆ. ದೈವಿಕ ಶಕ್ತಿ ಕೇಂದ್ರವಾದ ಮುರಿನಕಟ್ಟೆ ಧ್ವಂಸ ಪ್ರಕರಣವನ್ನು ಹಿಂದೂ ಕಾರ್ಯಕರ್ತರು ಮುಖ್ಯಮಂತ್ರಿಗಳಿಗೆ ವಿವರಿಸಿದ್ದು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ದಾಖಲಿಸಿದ ಪ್ರಕರಣ ಕೈ ಬಿಡಬೇಕು ಎಂದು ಸಹ ಒತ್ತಾಯಿಸಿದ್ದಾರೆ.