ಶಿರಸಿಯ ಶ್ರೀ ಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜೂನ್ 7ರಂದು ಅಧಿಕ ಜ್ಯೇಷ್ಠ ಮಾಸದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಪ್ರತಿ 3 ವರ್ಷಗಳಿಗೊಮ್ಮೆ ಬರುವ ಅಪರೂಪದ ಅಧಿಕ ಮಾಸದ ಅಂಗವಾಗಿ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಧಿಕ ಮಾಸದಲ್ಲಿ ವಿಶೇಷ ಸೇವೆಗಳನ್ನು ಮಾಡುವುದರಿಂದ ಅಧಿಕ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ, ಅಧಿಕ ಜ್ಯೇಷ್ಠ ಕೃಷ್ಣ ಪಕ್ಷ ಸಪ್ತಮಿ ಭಾನುವಾರ ವಿಶೇಷ ಪೂಜೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಶ್ರೀ ದೇವರ ಗರ್ಭಗುಡಿಯಲ್ಲಿ ಬೆಳಿಗ್ಗೆ 8.30 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರೀದೇವರ ಮೂಲಮೂರ್ತಿಗೆ ಶತಧಾರಕ್ಷೀರಾಭಿಷೇಕ ನೆರವೇರಿಸಲಾಗುತ್ತದೆ. ಬೆಳಿಗ್ಗೆ 11ರಿಂದ ನೂತನ ಭೂ ವೈಕುಂಠ ದ್ವಾರ ಮಂಟಪದಲ್ಲಿ ರಜತ ಪೀಠದಲ್ಲಿ ಪ್ರಧಾನ ಉತ್ಸವ ಮೂರ್ತಿಗೆ ವಿಷ್ಣು ಸಹಸ್ರನಾಮದಿಂದ ತುಳಸಿ ಅರ್ಚನೆ, ಹಾಗೂ 333 ದೀಪಾರಾಧನೆ, ದೀಪ ನಮಸ್ಕಾರ, 33 ಅಪೂಪ ಪೂಜೆ ಹಾಗೂ ದಾನ, ದ್ರವ್ಯಾಂಜಲಿ ಸೇವೆಗಳು ನೆರವೇರಲಿದೆ. ನಂತರ ಪ್ರಸಾದ ಭೋಜನ ವ್ಯವಸ್ಥೆಯೂ ಇರಲಿದೆ.
ಭಕ್ತರು ತಮ್ಮ ಇಚ್ಛೆಯಂತೆ ಈ ಸೇವೆಗಳಲ್ಲಿ ಭಾಗವಹಿಸಬಹುದಾಗಿದ್ದು, ವಿವಿಧ ಸೇವೆಗಳಿಗಾಗಿ ನಿಗದಿತ ಕಾಣಿಕೆ ವಿವರಗಳನ್ನು ದೇವಸ್ಥಾನ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಫೋನ್ ಮಾಡಿ: 8277226708, 6362024921, 9481585013, 8277419657