ಸಾಮಾನ್ಯವಾಗಿ ಜೂನ್ 1ರಂದು ಕೇರಳ ಪ್ರವೇಶಿಸುವ ಮಾನ್ಸೂನ್ ಈ ಬಾರಿ ಮೂರು ದಿನ ತಡವಾಗಿ ಆಗಮಿಸಿದೆ. ಕೇರಳಕ್ಕೆ ನೈಋತ್ಯ ಮಾನ್ಸೂನ್ ಪ್ರವೇಶಿದ ಬಗ್ಗೆ ಅಧಿಕೃತ ಘೋಷಣೆಯಾಗಿದ್ದು, ಅದರ ಪರಿಣಾಮ ಕರ್ನಾಟಕದ ಕರಾವಳಿ ಭಾಗಕ್ಕೂ ಬಿದ್ದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ಮೂರು ದಿನಗಳಿಂದ ಮಳೆಯಾಗುತ್ತಿದೆ.
ಸದ್ಯ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಶುರುವಾಗಿದ್ದು, ಅದು ಹಂತ ಹಂತವಾಗಿ ಜೋರಾಗುತ್ತಿದೆ. ಇದರಿಂದ ನದಿ, ಕೆರೆ ಹಾಗೂ ಜಲಾಶಯಗಳ ನೀರಿನ ಹರಿವು ಹೆಚ್ಚಾಗುತ್ತಿದೆ. ಮಳೆ ಶುರುವಾಗಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ಸಿಗಲಿದೆ. ಭತ್ತ, ಅಡಿಕೆ, ತೆಂಗು, ಮೆಣಸು ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ. ಅಲ್ಲದೆ, ಕಳೆದ ಕೆಲವು ವಾರಗಳಿಂದ ಕಾಡುತ್ತಿದ್ದ ಬಿಸಿಲಿನ ತಾಪಮಾನವೂ ಇದೀಗ ಕಡಿಮೆಯಾಗುತ್ತಿದೆ.
ಆದರೆ, ಮಾನ್ಸೂನ್ ಕೇವಲ ಸಂತಸದ ಸುದ್ದಿಯನ್ನಷ್ಟೇ ತರಲ್ಲ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾದರೆ ಗುಡ್ಡ ಕುಸಿತ, ಮರ ಬೀಳುವಿಕೆ, ರಸ್ತೆ ಹಾನಿ ಹಾಗೂ ಪ್ರವಾಹದಂತಹ ಸಮಸ್ಯೆಗಳು ಎದುರಾಗುವ ಸಾಧ್ಯತೆಯಿದೆ. ಸಮುದ್ರದಲ್ಲಿ ಗಾಳಿ ಮತ್ತು ಅಲೆಗಳ ತೀವ್ರತೆ ಹೆಚ್ಚಾಗುವುದರಿಂದ ಮೀನುಗಾರರು ವಿಶೇಷ ಎಚ್ಚರಿಕೆವಹಿಸಬೇಕಾಗುತ್ತದೆ. ಈ ಬಾರಿ ಮಾನ್ಸೂನ್ ತಡವಾಗಿ ಆಗಮಿಸಲು ಅರಬ್ಬಿ ಸಮುದ್ರದ ಮೇಲಿನ ಪಶ್ಚಿಮ ಗಾಳಿಗಳ ದುರ್ಬಲತೆ, ಮೋಡಗಳ ಬೆಳವಣಿಗೆಯಲ್ಲಿ ಕಂಡುಬAದ ವಿಳಂಬ ಹಾಗೂ ಅಗತ್ಯ ವಾತಾವರಣದ ಪರಿಸ್ಥಿತಿಗಳು ತಡವಾಗಿ ರೂಪುಗೊಂಡಿರುವುದೇ ಪ್ರಮುಖ ಕಾರಣಗಳೆಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಮಾನ್ಸೂನ್ ಕರ್ನಾಟಕಕ್ಕೆ ಕೃಷಿ, ಕುಡಿಯುವ ನೀರು ಮತ್ತು ಪರಿಸರದ ದೃಷ್ಟಿಯಿಂದ ವರದಾನವಾಗಿದ್ದರೂ, ಭಾರೀ ಮಳೆಯಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.