ಯಲ್ಲಾಪುರ ಹಾಗೂ ಮುಂಡಗೋಡಿನ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ನಡೆಯುತ್ತಿದೆ. ಆ ಯೋಜನೆಯಿಂದ ಯಾರಿಗೆ ಏನು ಉಪಯೋಗ? ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಯೋಜನೆಯಿಂದ ಆಗುವ ಉಪದ್ರವ ಮಾತ್ರ ಒಂದೆರಡಲ್ಲ!
ಯಲ್ಲಾಪುರ ತಾಲೂಕಿನ ಅನೇಕ ಕೆರೆಗಳು ಹೂಳಿನಿಂದ ತುಂಬಿದೆ. ಆ ಕೆರೆಗಳಲ್ಲಿನ ಹೂಳು ತೆಗೆಯಲು ಲಕ್ಷಾಂತರ ರೂ ಖರ್ಚಾಗಿದ್ದರೂ ಆಳದಲ್ಲಿದ್ದ ಮಣ್ಣು ಮಾತ್ರ ಮೇಲೆ ಬರುತ್ತಿಲ್ಲ. ಹೀಗಿರುವಾಗ ಸರ್ಕಾರ ಕಾಡು ಪ್ರಾಣಿ ಹಾಗೂ ಜಾನುವಾರುಗಳಿಗೆ ನೀರು ಕುಡಿಸುವುದಕ್ಕಾಗಿ ಕೆರೆಗಳಿಗೆ ನೀರು ತುಂಬಿಸಲು ಯೋಜನೆಯೊಂದನ್ನು ಮಾಡಿದೆ. ಸ್ಥಳೀಯವಾಗಿ ಈ ಯೋಜನೆ ಬಗ್ಗೆ ಯಾರಿಗೂ ಮಾಹಿತಿ ಇಲ್ಲ. ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಯೋಜನೆಯ ಆಳ-ಅಗಲದ ಬಗ್ಗೆ ಬಹಿರಂಗಪಡಿಸುತ್ತಿಲ್ಲ.
ಕೆರೆಗಳಿಗೆ ನೀರು ತುಂಬುವುದಕ್ಕಾಗಿ ವಿವಿಧ ಊರುಗಳಲ್ಲಿ ರಸ್ತೆ ಅಂಚಿನಲ್ಲಿ ಅಗೆಯಲಾಗಿದೆ. ಆಳದಲ್ಲಿ ದೊಡ್ಡ ದೊಡ್ಡ ಪೈಪುಗಳನ್ನು ಅಳವಡಿಸಲಾಗಿದೆ. ಪೈಪಿನ ಮೇಲೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾತ್ರ ಮಣ್ಣು ಹಾಕಲಾಗಿದ್ದು, ಮಳೆಗಾಲದ ಅವಧಿಯಲ್ಲಿ ರಸ್ತೆ ಕುಸಿತದ ಆತಂಕ ಶುರುವಾಗಿದೆ. ಸದ್ಯ ರಸ್ತೆ ಅಂಚಿನ ಪ್ರದೇಶದಲ್ಲಿ ಮಣ್ಣು ಮೆದುವಾಗಿದ್ದು, ವಾಹನಗಳ ಒಂದು ಚಕ್ರ ಅಲ್ಲಿ ಹೋದರೂ ಇಡೀ ಗಾಡಿ ಸಿಲುಕುತ್ತಿದೆ. ಹುಲಗೋಡು, ಕಣ್ಣಿಗೇರಿ ಸೇರಿ ವಿವಿಧ ಪ್ರದೇಶಗಳಲ್ಲಿ ಇದೇ ಪರಿಸ್ಥಿತಿಯಿದೆ.
`ಯಲ್ಲಾಪುರದಲ್ಲಿ ಮೂರು ತಿಂಗಳು ನೀರಿನ ಸಮಸ್ಯೆ ಕಾಡುತ್ತದೆ. ಕಾಡು ಪ್ರಾಣಿ ಹಾಗೂ ಜಾನುವಾರುಗಳಿಗೆ ನೀರು ಒದಗಿಸುವುದಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಲಾಗಿದೆ. ಸಮಸ್ಯೆವಿರುವ ಕಡೆ ಅದನ್ನು ಬಗೆಹರಿಸಲಾಗಿದ್ದು, ರಸ್ತೆ ಅಂಚಿನಲ್ಲಿ ಎಲ್ಲಿಯೂ ಹೊಂಡ ಬೀಳುವ ಪ್ರಸಂಗವಿಲ್ಲ. ಕೆಲ ಅತಿಕ್ರಮಣದಾರರು ಮನೆ ಕಟ್ಟಿಕೊಂಡ ಕಡೆ ಸಮಸ್ಯೆಯಿದ್ದು, ಅವರು ಅಲ್ಲಿ ಸರಿಯಾಗಿ ಮಣ್ಣು ತುಂಬಿಸಲು ಬಿಟ್ಟಿಲ್ಲ’ ಎಂದು
ಕರ್ನಾಟಕ ನೀರಾವರಿ ಅಭಿವೃದ್ಧಿ ನಿಗಮದ ಅಧಿಕಾರಿ ಮಹದೇವ್ ಹನುಮಂತಪ್ಪ ಅವರು ಹೇಳಿದರು.