`ಸಚಿವ ಸ್ಥಾನ ಸಿಗದಿದ್ದರೂ ಕ್ಷೇತ್ರದ ಅಭಿವೃದ್ದಿಗೆ ಅಗತ್ಯವಿರುವ ಅನುದಾನ ತರುವ ತಾಕತ್ತು ನನಗಿದೆ. ಸರ್ಕಾರ ಹಾಗೂ ಮುಖ್ಯಮಂತ್ರಿಗಳಿoದ ಕೆಲಸ ಮಾಡಿಸಿಕೊಳ್ಳುವ ವಿಧಾನವೂ ಗೊತ್ತಿದೆ’ ಎಂದು ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಸಚಿವ ಸ್ಥಾನ ಸಿಗದ ಕಾರಣ ನಾನು ಬೇಸರ ಮಾಡಿಕೊಳ್ಳುವ ಮನಸ್ಥಿತಿಯವನಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ಷೇತ್ರಕ್ಕೆ ಬೇಕಾದ ಕೆಲಸಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಹೀಗಾಗಿ ಕಾರವಾರದ ಮಟ್ಟಿಗೆ ನಾನೇ ಸಿಎಂ’ ಎಂದವರು ಹೇಳಿದ್ದಾರೆ. `ಹಿಂದಿನ ಸರ್ಕಾರಕ್ಕಿಂತ ಹೆಚ್ಚಿನ ಅನುದಾನವನ್ನು ಕಾರವಾರ ಕ್ಷೇತ್ರಕ್ಕೆ ತಂದು ತೋರಿಸುತ್ತೇನೆ. ಅಪಪ್ರಚಾರ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ’ ಎಂದು ಹೇಳಿದ್ದಾರೆ. `ಅಪಪ್ರಚಾರ ಮಾಡುವವರು ದಾಖಲೆ ಬಿಡುಗಡೆ ಮಾಡಲಿ’ ಎಂದು ಅವರು ಸವಾಲು ಹಾಕಿದ್ದಾರೆ.
`ಕ್ಷೇತ್ರದ ಜನರ ಭವಿಷ್ಯ ಹಾಗೂ ಅಭಿವೃದ್ಧಿ ವಿಷಯದಲ್ಲಿ ಎಂದಿಗೂ ರಾಜಿ ಇಲ್ಲ. ಹೊಸ ಅಧಿಕಾರಿಗಳಿಗೆ ಕ್ಷೇತ್ರ ಅಧ್ಯಯನಕ್ಕೆ ಕೊಂಚ ಸಮಯ ಬೇಕಿದ್ದು, ಕ್ರಮೇಣ ಎಲ್ಲವೂ ಸರಿಯಾಗಲಿದೆ’ ಎಂದಿದ್ದಾರೆ. `ಸಂಚಾರ ಸಮಯ, ಇಂಧನ ಉಳಿತಾಯ ಹಾಗೂ ಸುಲಭ ಕನೆಕ್ಟಿವಿಟಿ ದೃಷ್ಟಿಯಿಂದ ಬೆಳೇಕೇರಿಯಿಂದ ಹಾರವಾಡವರೆಗೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣಕ್ಕೆ 30 ಕೋಟಿ ರೂಪಾಯಿ ಮಂಜೂರಾಗಿದೆ. ಈ ಯೋಜನೆಯು ಮುದಗಾದಿಂದ ಗೋಕರ್ಣದವರೆಗಿನ ಸಂಪರ್ಕಕ್ಕೆ ಅನುಕೂಲವಾಗಲಿದೆ. ಇದರೊಂದಿಗೆ ಹಾರವಾಡ ಶಾಲೆಯ ದುರಸ್ತಿಗೆ ತಕ್ಷಣವೇ 30 ಲಕ್ಷ ರೂ ಅನುದಾನ ನೀಡಿದ್ದು, ಕೊರತೆಯಾಗುವ ಹಣವನ್ನು ಶಾಸಕರ ನಿಧಿಯಿಂದ ಕೊಡುವೆ’ ಎಂದಿದ್ದಾರೆ.
`ಕೈಗಾದ ದೊಡ್ಡ ಯಂತ್ರಗಳ ಸಂಚಾರಕ್ಕೆ ಅನುಕೂಲವಾಗುವಂತೆ ಮುನ್ನೆಚ್ಚರಿಕೆಯಿಂದ ಡಿವೈಡರ್ ತೆರವು ಮಾಡಿಸಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ನಾನು ಎಂಜಿನಿಯರ್ ಆಗಿ ದೂರದೃಷ್ಟಿಯಿಂದ ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ನಷ್ಟದಲ್ಲಿರುವ ನಿರಾಶ್ರಿತರ ಕಾಲನಿಯ ರಸ್ತೆ ಹಾಗೂ ಸೇತುವೆ ಸಂಪರ್ಕವನ್ನು ಮರುನಿರ್ಮಾಣ ಮಾಡಲು ಶೀಘ್ರವೇ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ’ ಎಂದಿದ್ದಾರೆ.