ಡಿ ಕೆ ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಮಂಕಾಳು ವೈದ್ಯ ಅವರಿಗೆ ಸಚಿವರಾಗುವ ಅವಕಾಶ ಕೊನೆಘಳಿಗೆಯಲ್ಲಿ ಕೈ ತಪ್ಪಿದೆ. ಈ ವಿಷಯವಾಗಿ ಅನೇಕ ಕಾಂಗ್ರೆಸ್ಸಿಗರೇ ಮೌನವಾಗಿದ್ದಾರೆ. ಆದರೆ, ಮಂಕಾಳು ವೈದ್ಯರಿಗೆ ಆದ ಅನ್ಯಾಯವನ್ನು ಬಿಜೆಪಿಗರು ಖಂಡಿಸಿದ್ದಾರೆ.
ಈ ಹಿಂದೆ ಮಂಕಾಳು ವೈದ್ಯರ ವಿರುದ್ಧ ವಾಗ್ದಾಳಿ ಮಾಡಿದ್ದ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಮಂಕಾಳು ವೈದ್ಯ ಅವರ ಬಗ್ಗೆ ಅನುಕಂಪದ ಮಾತನಾಡಿದ್ದಾರೆ. `ಅವರಿಗೆ ಹಾಗಾಗಬಾರದಿತ್ತು’ ಎಂಬ ನಿಟ್ಟಿನಲ್ಲಿ ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೇತೃತ್ವದ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಸಚಿವ ಸ್ಥಾನ ನೀಡದಿರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜಿಲ್ಲೆಯ ಜನರಿಗೆ ಅವಮಾನ ಮಾಡಿದೆ’ ಎಂದು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ. `ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು, ಜಿಲ್ಲೆಯ ಜನ ಇದನ್ನು ಯಾವಾಗಲೂ ಕ್ಷಮಿಸುವುದಿಲ್ಲ. `ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ಎಂದು ಅಧಿಕೃತವಾಗಿ ಪ್ರಕಟಿಸಿ, ಕೊನೆಯ ಕ್ಷಣದಲ್ಲಿ ಸಚಿವ ಸ್ಥಾನದಿಂದ ವಂಚಿಸಿರುವುದು ದೊಡ್ಡ ಅವಮಾನ’ ಎಂದವರು ಹೇಳಿದ್ದಾರೆ. `ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗದವರ ವಿರೋಧಿಯಾಗಿದೆ’ ಎಂದು ಸಹ ಅನಂತಮೂರ್ತಿ ಹೆಗಡೆ ಅವರು ಕಿಡಿಕಾರಿದ್ದಾರೆ.
`ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನಕ್ಕೆ ಮಂಕಾಳು ವೈದ್ಯರ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಬಳಿಕ ಎಸ್ ಎಸ್ ಮಲ್ಲಿಕಾರ್ಜುನ್ ಎಂದು ಬರೆಯಲಾಯಿತು. ಪ್ರಶ್ನಿಸಿದಾಗ ಮಂಕಾಳು ವೈದ್ಯ ಅವರ ಹೆಸರು ಪ್ರಿಂಟಿAಗ್ ಮಿಸ್ಟೆಕಿನಿಂದ ಪ್ರಕಟವಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿರುವುದು ಹಾಸ್ಯಾಸ್ಪದ’ ಎಂದು ಅನಂತಮೂರ್ತಿ ಹೆಗಡೆ ಅವರು ಹೇಳಿದ್ದಾರೆ. `ಕಲಬುರಗಿ ಜಿಲ್ಲೆಗೆ ಮೂರು ಸಚಿವ ಸ್ಥಾನಗಳನ್ನು ನೀಡಿರುವ ಕಾಂಗ್ರೆಸ್ ಸರ್ಕಾರ ಭೌಗೋಳಿಕವಾಗಿ ಗೋವಾಗಿಂತ ದೊಡ್ಡದಾಗಿರುವ ಉತ್ತರ ಕನ್ನಡ ಜಿಲ್ಲೆಗೆ ಒಂದೇ ಒಂದು ಸಚಿವ ಸ್ಥಾನವನ್ನೂ ನೀಡಿಲ್ಲ. ಇದರ ಮೂಲಕ ಜಿಲ್ಲೆಗೆ ಹಾಗೂ ಹಿಂದುಳಿದ ವರ್ಗದವರಿಗೆ ತೀವ್ರ ಅನ್ಯಾಯ ಮಾಡಲಾಗಿದೆ’ ಎಂದು ದೂರಿದ್ದಾರೆ. `ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿಗಳ ಆಮಿಷದಿಂದ ಜಿಲ್ಲೆಯ ನಾಲ್ವರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೂ ಜಿಲ್ಲೆಗೆ ಸಚಿವ ಸ್ಥಾನ ನೀಡದೆ ಸಣ್ಣ ಸಮುದಾಯ ಹಾಗೂ ಹಿಂದುಳಿದ ವರ್ಗಕ್ಕೆ ಅನ್ಯಾಯ ಮಾಡಲಾಗಿದೆ’ ಎಂದವರು ಹೇಳಿದ್ದಾರೆ.