ಉತ್ತರ ಕನ್ನಡ ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಬೆಂಬಲಿತ ಶಾಸಕರಿದ್ದರೂ ಕಾಂಗ್ರೆಸ್ ಮಾತ್ರ ಇಲ್ಲಿನ ಒಬ್ಬರಿಗೂ ಸಚಿವ ಸ್ಥಾನ ನೀಡಿಲ್ಲ. ಸಚಿವ ಸ್ಥಾನ ಸಿಗದ ಶಾಸಕರು ಅಸಮಧಾನಕ್ಕೆ ಒಳಗಾಗಿದ್ದು, ಅವರನ್ನು ಸಮಾಧಾನ ಮಾಡುವುದಕ್ಕಾಗಿ ಸಚಿವ ಲಕ್ಷ್ಮಣ ಸವದಿ ಅವರೇ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿವಹಿಸಿಕೊಂಡಿರುವ ಸಚಿವ ಲಕ್ಷ್ಮಣ ಸವದಿ ಅವರು ಇಲ್ಲಿನ ಎಲ್ಲಾ ಶಾಸಕರ ಸಭೆ ನಡೆಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಅವರು ಎರಡು ದಿನಗಳ ಕಾಲ ಉತ್ತರ ಕನ್ನಡ ಪ್ರವಾಸಕ್ಕೆ ನಿರ್ಣಯಿಸಿದ್ದಾರೆ. ರಾಜ್ಯ ಸಂಪುಟ ದರ್ಜೆ ಸಚಿವರಾಗಿ ಲಕ್ಷ್ಮಣ ಸವದಿ ಅವರು ಅಧಿಕಾರ ಸ್ವೀಕರಿಸಿದ್ದು, ಅದರ ಬೆನ್ನಲ್ಲೆ ಅಗಸ್ಟ 6 ಹಾಗೂ 7ರಂದು ಉತ್ತರ ಕನ್ನಡ ಜಿಲ್ಲೆಗೆ ಬರುವ ಮನಸ್ಸು ಮಾಡಿದ್ದಾರೆ. ಸಚಿವರ ಆಪ್ತಸಹಾಯಕರ ಪ್ರಕಟಣೆ ಹಾಗೂ ಮಾಹಿತಿ ಪ್ರಕಾರ ಲಕ್ಷ್ಮಣ ಸವದಿ ಅವರು ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಸಂಚರಿಸಿ ಅಲ್ಲಿ ಅವರು ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಅಧ್ಯಯನ ನಡೆಸಲಿದ್ದಾರೆ. ಆದರೆ, ವಾಸ್ತವವಾಗಿ ಅವರು ಮುನಿಸಿಕೊಂಡಿರುವ ಶಾಸಕರನ್ನು ವಿಶ್ವಾಸಕ್ಕೆಪಡೆಯುವುದಕ್ಕಾಗಿ ಈ ಪ್ರವಾಸ ಆಯೋಜಿಸಿದ್ದಾರೆ. ಅಧಿಕಾರಿಗಳ ಜೊತೆಗೆ ಸಭೆ ಮಾಡುವ ಮುನ್ನವೇ ವಿವಿಧ ಶಾಸಕರ ಜೊತೆ ಸಮಾಲೋಚನೆ ನಡೆಸಿ, ಅವರೊಳಗಿನ ಅಸಮಧಾನವನ್ನ ಶಮನ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಸಚಿವ ಲಕ್ಷö್ಮಣ ಸವದಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಹಾನಿಗೀಡಾದ ಪ್ರದೇಶಗಳನ್ನು ಖುದ್ದಾಗಿ ವೀಕ್ಷಿಸಲಿದ್ದಾರೆ ಎಂದು ಅವರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ ಅಗಸ್ಟ 6ರಂದು ಸಚಿವರು ಕಾರವಾರ, ಅಂಕೋಲಾ ಮತ್ತು ಹೊನ್ನಾವರ ಪ್ರವಾಸ ಮಾಡಲಿದ್ದಾರೆ. ವಿಮಾನದ ಮೂಲಕ ಗೋವಾಗೆ ಬರಲಿರುವ ಸಚಿವರು ಆ ದಿನ ಬೆಳಿಗ್ಗೆ 9.30ಕ್ಕೆ ಗೋವಾದಿಂದ ರಸ್ತೆ ಮೂಲಕ ನಿರ್ಗಮಿಸಿ ಕಾರವಾರ ತಲುಪಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಕಾರವಾರದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 11ಕ್ಕೆ ಕಾರವಾರದ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಅಂಕೋಲಾ ತಾಲೂಕಿನ ಆಯ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಸಂಜೆ 5.00ಕ್ಕೆ ಹೊನ್ನಾವರಕ್ಕೆ ಆಗಮಿಸಿ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕುಗಳ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಹೊನ್ನಾವರದ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಸಭೆ ನಡೆಸಲಿದ್ದಾರೆ. ಜೊತೆಗೆ ಆಯ್ದ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಅದೇ ದಿನ ರಾತ್ರಿ 8.30ಕ್ಕೆ ಶಿರಸಿಗೆ ಆಗಮಿಸಿ ಅಲ್ಲಿನ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಗಸ್ಟ್ 7:ರಂದು ಶಿರಸಿ, ಮುಂಡಗೋಡ ಹಾಗೂ ಹಳಿಯಾಳ ಭಾಗದ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ. ಬೆಳಿಗ್ಗೆ 9.30ಕ್ಕೆ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಅದಾದ ನಂತರ ಬೆಳಿಗ್ಗೆ 10ಕ್ಕೆ ಶಿರಸಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. 10.30ಕ್ಕೆ ಶಿರಸಿ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ಬೆಳಿಗ್ಗೆ 11.30ಕ್ಕೆ ಶಿರಸಿ ತಾಲೂಕಿನ ಆಯ್ದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.
ಮಧ್ಯಾಹ್ನ 1ಗಂಟೆಗೆ ಶಿರಸಿ ತಾಲೂಕಿನ ಬನವಾಸಿ ಭಾಗದ ಆಯ್ದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3ಕ್ಕೆ ಮುಂಡಗೋಡದ ಲೋಕೋಪಯೋಗಿ ಪರೀಕ್ಷಣಾ ಮಂದಿರದಲ್ಲಿ ಯಲ್ಲಾಪುರ ಮತ್ತು ಮುಂಡಗೋಡ ತಾಲೂಕಿನ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ಮತ್ತು ವೀಕ್ಷಣೆ ನಡೆಸಲಿದ್ದಾರೆ. ಸಂಜೆ 4.30ಕ್ಕೆ ಹಳಿಯಾಳದ ಪುರಭವನ ಸಭಾಂಗಣದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ಮತ್ತು ಆಯ್ದ ಪ್ರದೇಶಗಳ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6.00ಕ್ಕೆ ಹಳಿಯಾಳದಿಂದ ರಸ್ತೆ ಮೂಲಕ ಧಾರವಾಡ ಮಾರ್ಗವಾಗಿ ಪ್ರಯಾಣ ಬೆಳೆಸಿ, ರಾತ್ರಿ 7.30ಕ್ಕೆ ಬೆಳಗಾವಿ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ.