ಮುಂಡಗೋಡಿನಲ್ಲಿ ಈಚೆಗೆ ಮನೆ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಬೇರೆ ಬೇರೆ ಅವಧಿಯಲ್ಲಿ ಮನೆ ಬಿಟ್ಟು ಹೋಗಿ, ಈವರೆಗೂ ಮರಳದವರಿಗಾಗಿ ಪೊಲೀಸರು ಶೋಧ ಶುರು ಮಾಡಿದ್ದಾರೆ.
ಮುಂಡಗೋಡ ತಾಲೂಕಿನ ಪಾಳಾ ಗ್ರಾಮದ ನಿವಾಸಿ ಸಂತೋಷ್ ಶೇಕಪ್ಪ ಮಲ್ಲೂರ (36) ಅವರು 2024ರ ಸೆಪ್ಟೆಂಬರ್ 10ರಂದು ಕಾಣೆಯಾಗಿದ್ದಾರೆ. ಆ ದಿನ ಸಂಜೆ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ಅವರು ನಂತರ ಯಾರ ಕಣ್ಣಿಗೂ ಬಿದ್ದಿಲ್ಲ. ಗೋಧಿ ಮೈಬಣ್ಣ, ದುಂಡನೆಯ ಮುಖ, 5.5 ಅಡಿ ಎತ್ತರ ಹಾಗೂ ಸದೃಢ ಮೈಕಟ್ಟು ಹೊಂದಿರುವ ಸಂತೋಷ್ ಅವರು ಮನೆಯಿಂದ ಹೊರಡುವಾಗ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಚಾಕೊಲೇಟ್ ಬಣ್ಣದ ಟೀಶರ್ಟ್ ಧರಿಸಿದ್ದರು. ಅವರು ಕನ್ನಡ, ಹಿಂದಿ ಹಾಗೂ ತೆಲುಗು ಭಾಷೆಗಳನ್ನು ಮಾತನಾಡುತ್ತಾರೆ.
ಮುಂಡಗೋಡಿನ ನಂದೀಶ್ವರನಗರದಲ್ಲಿ ವಾಸವಾಗಿದ್ದ ಆದಿತಿ ಆನಂದ ಬಸ್ತವಾಡ (29) ಎಂಬಾತರು ದಿಢೀರ್ ಆಗಿ ಕಾಣೆಯಾಗಿದ್ದಾರೆ. 2025ರ ಮಾರ್ಚ್ 7ರಂದು ಅವರು ಕಣ್ಮರೆಯಾಗಿದ್ದಾರೆ. ಅಂದು ಬೆಳಿಗ್ಗೆ 10ರಿಂದ ಸಂಜೆ 4 ಗಂಟೆಯ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾರಿಗೂ ತಿಳಿಸದೆ ಅವರು ಹೊರಟು ಹೋಗಿದ್ದಾರೆ. 5.4 ಅಡಿ ಎತ್ತರ, ಗೋಧಿ ಮೈಬಣ್ಣ ಹಾಗೂ ಉದ್ದನೆಯ ಮುಖ ಹೊಂದಿರುವ ಅವರು ಮನೆಯಿಂದ ಹೊರಗೆ ಹೋಗುವಾಗ ಕಪ್ಪು-ಬಿಳಿ ಮಿಶ್ರಿತ ಟೀಶರ್ಟ್ ಮತ್ತು ನೈಟ್ ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ ಮತ್ತು ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಮೂಲತ ಬೆಳಗಾವಿ ಜಿಲ್ಲೆಯವರಾಗಿದ್ದಾರೆ.
ಹಿರೇಹಳ್ಳಿ ಗ್ರಾಮದ ನಿವಾಸಿ ಆಂಜನೇಯ ಜಟ್ಟಿಂಗಪ್ಪ ಕೃಷ್ಣಾಜಿಯವರ (45) ಅವರು 2025ರ ಜೂನ್ 19ರಂದು ಮಧ್ಯಾಹ್ನ 3 ಗಂಟೆಯಿAದ ಕಾಣಿಸುತ್ತಿಲ್ಲ. ಅಲ್ಲಿಯವರೆಗೆ ಮನೆಯಲ್ಲಿಯೇ ಇದ್ದ ಅವರು ಯಾರಿಗೂ ಹೇಳದೆ ಹೊರಟು ಹೋಗಿದ್ದು, ಇದುವರೆಗೂ ಮನೆಗೆ ಮರಳಿ ಬಂದಿಲ್ಲ. ಗೋಧಿ ಮೈಬಣ್ಣ, ಉದ್ದನೆಯ ಮುಖ ಹಾಗೂ 5.4 ಅಡಿ ಎತ್ತರವಿರುವ ಅವರು ಕಣ್ಮರೆಯಾದ ಸಮಯದಲ್ಲಿ ಗುಲಾಬಿ ಬಣ್ಣದ ಶರ್ಟ್ ಹಾಗೂ ಚೆಕ್ಸ್ ಲುಂಗಿ ಧರಿಸಿದ್ದರು. ಅವರು ಕನ್ನಡ ಭಾಷೆ ಮಾತನಾಡುತ್ತಾರೆ. 2026ರ ಏಪ್ರಿಲ್ 24ರಂದು ಗಣೇಶಪುರ ಗ್ರಾಮದ ತಮ್ಮ ತಮ್ಮನ ಮನೆಗೆ ಬಂದಿದ್ದ ಮಂಜುನಾಥ್ ಫಕೀರಪ್ಪ ಭೋವಿವಡ್ಡರ (35) ಅವರು ಸಹ ಕಾಣೆಯಾಗಿದ್ದಾರೆ. ಆ ದಿನ ಬೆಳಗ್ಗೆ 11 ಗಂಟೆಯ ಸುಮಾರಿಗೆ ಹೊರಗಡೆ ಹೋಗಿ ಬರುವುದಾಗಿ ಹೇಳಿ ಹೋದವರು ಮತ್ತೆ ಮರಳಿ ಬಂದಿಲ್ಲ. ಗೋಧಿ ಮೈಬಣ್ಣ, ದುಂಡನೆಯ ಮುಖ, 5.6 ಅಡಿ ಎತ್ತರ ಹೊಂದಿರುವ ಅವರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಅವರು ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆಗಳನ್ನು ಮಾತನಾಡುತ್ತಾರೆ.
ಈ ಎಲ್ಲರ ಬಗ್ಗೆ ಪೊಲೀಸರು ಶೋಧ ನಡೆಸಿದ್ದು, ಅವರ ಬಗ್ಗೆ ಮಾಹಿತಿ ಇದ್ದರೆ ಇಲ್ಲಿ ಫೋನ್ ಮಾಡಿ: ಕಾರವಾರ ಕಂಟ್ರೋಲ್ ರೂಂ 08382-226550, ಮುಂಡಗೋಡ ಪೊಲೀಸ್ ಠಾಣೆ: 08301-222211, ಮುಂಡಗೋಡ ಪಿ.ಎಸ್.ಐ.: 9480805275 ಅಥವಾ ಮುಂಡಗೋಡ ಪಿ.ಐ: 9480805258