ಗ್ರಾಮ ಪಂಚಾಯತ ಅಧಿಕಾರಿ ಹಾಗೂ ಸಿಬ್ಬಂದಿ ಅನುಭವಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘದವರು ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮುಖ್ಯವಾಗಿ ಕಂದಾಯ ಇಲಾಖೆಯ ಕೆಲಸವನ್ನು ಗ್ರಾಮ ಪಂಚಾಯತ ಕಚೇರಿಗೆವಹಿಸಿದ್ದರಿಂದ ಆಗುವ ಅನಾನುಕೂಲಗಳ ಬಗ್ಗೆ ವಿವರಿಸಿದ್ದಾರೆ.
`ಗ್ರಾಮ ಪಂಚಾಯತ ನೌಕರರಿಗೆ ಅನ್ಯ ಇಲಾಖೆಯ ಕೆಲಸಗಳನ್ನು ವಹಿಸಲಾಗುತ್ತಿದೆ. ಇದರಿಂದ ಕೆಲಸದ ಒತ್ತಡ ಹೆಚ್ಚಾಗಿದ್ದು, ಗ್ರಾಮ ಪಂಚಾಯತ ಕೆಲಸ ನಿರ್ವಹಣೆಗೆ ಸಮಸ್ಯೆ ಆಗುತ್ತಿದೆ. ಗ್ರಾಮೀಣ ಸ್ವರಾಜ್ಯದ ಮೂಲ ಘಟಕಗಳಾದ ಗ್ರಾಮ ಪಂಚಾಯತಗಳ ಮೂಲಕ ಸರ್ಕಾರದ ಯೋಜನೆ ಹಾಗೂ ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಮಹತ್ವದ ಜವಾಬ್ದಾರಿಯಿದ್ದು, ಅದಕ್ಕೆ ಹಿನ್ನಡೆ ಆಗದ ಹಾಗೇ ಕ್ರಮವಹಿಸಬೇಕು’ ಎಂದು ಆಗ್ರಹಿಸಿದ್ದಾರೆ. ಗ್ರಾಮ ಪಂಚಾಯತ ಸಿಬ್ಬಂದಿ ಕೇವಲ ಕಚೇರಿ ಕೆಲಸಕ್ಕೆ ಮಾತ್ರ ಸೀಮಿತವಾಗಿರದೇ ಕುಡಿಯುವ ನೀರು ಸರಬರಾಜು, ಉದ್ಯೋಗ ಖಾತ್ರಿ ಅನುಷ್ಠಾನ, ಸ್ವಚ್ಛ ಭಾರತ, ಜಲ ಜೀವನ ಯೋಜನೆ ಜೊತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ನೋಡುತ್ತಿದ್ದಾರೆ. ಹೀಗಿರುವಾಗ, ಕಂದಾಯ ಇಲಾಖೆಗೆ ಸಂಬAಧಿಸಿದ ಜಾತಿ ಪ್ರಮಾಣ ಪತ್ರ ವಿತರಣೆಯನ್ನು ಗ್ರಾಮ ಪಂಚಾಯತಗೆ ನೀಡುವುದು ಸರಿಯಲ್ಲ’ ಎಂದವರು ಹೇಳಿದ್ದಾರೆ.
`ನಾಡ ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿಗಳು ನಿರ್ವಹಿಸಬೇಕಾದ ಕೆಲಸಗಳನ್ನು ಸದ್ಯ ಗ್ರಾಮ ಪಂಚಾಯತ ನೌಕರರಿಗೆ ನೀಡಲಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತದ ಮೂಲ ಕೆಲಸಗಳಿಗೆ ಸಮಸ್ಯೆ ಆಗುತ್ತಿದೆ. ಸಾರ್ವಜನಿಕ ಸೇವೆಗಳಿಗೆ ಅಡಚಣೆ ಆಗುತ್ತಿರುವುದನ್ನು ಪರಿಗಣಿಸಿ, ಗ್ರಾಮ ಪಂಚಾಯತಗೆ ಹೆಚ್ಚುವರಿಯಾಗಿ ನೀಡಿದ ಕೆಲಸಗಳನ್ನು ಹಿಂಪಡೆಯಬೇಕು. ಈ ಮನವಿಗೆ ಸ್ಪಂದಿಸದೇ ಇದ್ದರೆ ಗ್ರಾಮ ಪಂಚಾಯತದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಿ ಹೋರಾಟ ನಡೆಸುವುದು ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ. ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಶ್ರೇಯೋಭಿವೃದ್ಧಿ ಸಂಘ ಆರ್ ಡಿ ಪಿ ಆರ್ (ರಿ) ಯಲ್ಲಾಪುರ ತಾಲೂಕು ಸಮಿತಿಯ ಅಧ್ಯಕ್ಷ ಲೋಹಿತ್ ಹುಲಸ್ವಾರ, ಉಪಾಧ್ಯಕ್ಷ ಗಣಪತಿ ಪೂಜಾರಿ, ಕಾರ್ಯದರ್ಶಿ ಶ್ರವಣಕುಮಾರ ಚಂದಾವರ ಮತ್ತು ಖಚಾಂಚಿ ಭಾಸ್ಕರ ಶೇರುಗಾರ ಅವರು ಇನ್ನಿತರರ ಜೊತೆ ಸೇರಿ ಈ ಮನವಿ ಪತ್ರ ನೀಡಿದ್ದಾರೆ.