`ಮೂರು ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ರಸ್ತೆಗಳ ನಿರ್ವಹಣೆ ಸರಿಯಾಗಿ ಮಾಡುತ್ತಿಲ್ಲ. ಅದರಿಂದಾಗಿ ಎಲ್ಲಾ ರಸ್ತೆಗಳು ಹೊಂಡಗಳಿoದ ಕೂಡಿದೆ’ ಎಂದು ಯಲ್ಲಾಪುರ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಅವರು ದೂರಿದ್ದಾರೆ. ಹೊಂಡ ಮುಚ್ಚದೇ ಇದ್ದರೆ ಅದರೊಳಗೆ ಗಿಡ ನೆಟ್ಟು ಪ್ರತಿಭಟಿಸುವುದಾಗಿ ಅವರು ಘೋಷಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಕಾಂಗ್ರೆಸ್ ಸರಕಾರ ಕಳೆದ ಮೂರು ವರ್ಷಗಳಿಂದ ರಸ್ತೆಗಳನ್ನು ನಿರ್ವಹಣೆ ಮಾಡುತ್ತಿಲ್ಲ. ಲೋಕೋಪಯೋಗಿ ರಸ್ತೆಗಳ ನಿರ್ವಹಣೆ ಆಗದೇ ಇದ್ದರೆ ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು. `ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಅಲ್ಲಿಯೇ ಮೊಕ್ಕಾಂ ಹೂಡಿ ಪ್ರತಿಭಟನೆ ನಡೆಸಲಾಗುತ್ತದೆ. ಆ ಮೂಲಕ ಸರ್ಕಾರಕ್ಕೂ ಛೀಮಾರಿ ಹಾಕಲಾಗುತ್ತದೆ’ ಎಂದು ತಿಳಿಸಿದರು. ಬಿಜೆಪಿಯ ಕಂಪ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಿನೇಶ ಭಟ್ಟ ಮಾಳಕೊಪ್ಪ ಹಾಗೂ ಇಡಗುಂದಿ ಮಹಾಶಕ್ತಿ ಕೇಂದ್ರದ ಜಿ ಆರ್ ಭಾಗ್ವತ್ ಅವರು ಮಾತನಾಡಿ `ಯಲ್ಲಾಪುರ ಶಿರಸಿ ರಸ್ತೆ, ಚಿನ್ನಾಪುರ ಬಾರೆ ರಸ್ತೆ, ನಂದೊಳ್ಳಿ ಮಾಗೋಡ ರಸ್ತೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದೆ. ವಾರದೊಳಗೆ ರಿಪೇರಿ ನಡೆಯದಿದ್ದರೆ ಪ್ರತಿಭಟನೆ ಅನಿವಾರ್ಯ’ ಎಂದರು.
ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ ಅವರು ಮಾತನಾಡಿ `ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಬ್ದಾರಿಯಿಂದ ರಸ್ತೆ ಹಾಳಾಗಿದೆ’ ಎಂದು ದೂರಿದರು. ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯ ಗಣೇಶ ಪಾಟಣಕರ್ ಅವರು `ಪಟ್ಟಣದಲ್ಲಿ ಹಂದಿಗಳು, ಬೀಡಾಡಿ ದನಗಳು, ನಾಯಿಗಳ ಹಾವಳಿ ಮಿತಿ ಮೀರಿದೆ. ವಾಹನ ಸವಾರರಿಗೆ ತೀವೃ ತೊಂದರೆ ಆಗುತ್ತಿದೆ. ಅಪಘಾತವಾದರೆ ಯಾರು ಹೊಣೆ?’ ಎಂದು ಪ್ರಶ್ನಿಸಿದರು. ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಮೇಶ್ವರ ನಾಯ್ಕ ಅವರು ಮಾತನಾಡಿ `ಅಲಂಕಾರಿಕ ದೀಪ ಆರು ವರ್ಷದಿಂದ ಪೂರ್ಣ ಆಗಿಲ್ಲ. ತಕ್ಷಣ ಸರಿಪಡಿಸದಿದ್ದಲ್ಲಿ ಇಲಾಖೆಯ ಎದುರು ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಸಿದರು. ಪ್ರಮುಖರಾದ ನಾಗೇಂದ್ರ ಪತ್ರೇಕರ ಅವರು ಇದ್ದರು.