ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ವಾಲ್ಮೀಕಿ ಮಹರ್ಷಿಗಳ ಬ್ಯಾನರ್ ಹಿಡಿದು ಹೋಗುತ್ತಿದ್ದ ದಾಂಡೇಲಿಯ ತೇಜಸ್ ಅರಶಿನಗುಡಿ ಅವರಿಗೆ ಅದೇ ಮೆರವಣಿಗೆಯಲ್ಲಿ ಭಾಗವಹಿಸಿದ್ದ ರೋಹಿತ ನಾಯ್ಕ ಸಹಚರರು ಹೊಡೆದಿದ್ದಾರೆ. ರೋಹಿತ ನಾಯ್ಕ ಅವರ ಜೊತೆ ಸುಜಲ್ ನಾಯ್ಕ, ಪರಶುರಾಮ ಲಮಾಣಿ ಹಾಗೂ ಶ್ಯಾಮ ಅವರ ಥಳಿತಕ್ಕೆ ಒಳಗಾದ ತೇಜಸ್ ಅರಶಿನಗುಡಿ ಅವರು ಅತೀವ ಪ್ರಮಾಣದಲ್ಲಿ ನೋವು ಅನುಭವಿಸುತ್ತಿದ್ದಾರೆ.
ಹಳೆದಾಂಡೇಲಿ ಅರಣ್ಯ ಬಳಿಯ ನೀರಿನ ಟಾಕಿ ಬಳಿ ತೇಜಸ್ ಮಹೇಶ ಅರಶಿನಗುಡಿ ಅವರು ವಾಸವಾಗಿದ್ದಾರೆ. 20 ವರ್ಷದ ಅವರು ಪ್ಲಂಬಿoಗ್ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಸೆಪ್ಟೆಂಬರ್ 22ರಂದು ದಾಂಡೇಲಿಯ ಸಾಯಿ ಸರ್ಕಲ್ ಬಳಿಯ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ತೇಜಸ್ ಅರಶಿನಗುಡಿ ಅವರು ನಿರ್ಧರಿಸಿದ್ದಾರೆ. ಅದರಂತೆ, ಸಂಜೆ ಅವರು ಮಹರ್ಷಿ ವಾಲ್ಮೀಕಿ ಅವರ ಬ್ಯಾನರ್ ಹಿಡಿದು ಎಸ್‌ಬಿಐ ಬ್ಯಾಂಕ್ ಹತ್ತಿರದ ಲೆನೋನಿ ಕಾಲೋನಿ ಬಳಿ ಸಂಚಾರ ಮಾಡಿದ್ದಾರೆ. ರಾತ್ರಿ 9.45ಕ್ಕೆ ಅದೇ ಬ್ಯಾನರ್ ಹಿಡಿದು ಅವರು ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡಾನ್ಸ್ ಶುರು ಮಾಡಿದ್ದಾರೆ.
ಈ ಮೆರವಣಿಗೆಯಲ್ಲಿ ರೋಹಿತ ನಾಯ್ಕ ಅವರ ಜೊತೆ ಸುಜಲ್ ನಾಯ್ಕ, ಪರಶುರಾಮ ಲಮಾಣಿ ಹಾಗೂ ಶ್ಯಾಮ ಅವರು ಭಾಗವಹಿಸಿದ್ದಾರೆ. ತೇಜಸ್ ಅರಶಿನಗುಡಿ ಅವರನ್ನು ನೋಡಿದ ಆ ನಾಲ್ವರು ವಾಲ್ಮೀಕಿ ಸಮುದಾಯದ ಬಗ್ಗೆ ಕೆಟ್ಟ ಮಾತನಾಡಿದ್ದಾರೆ. ಇದಕ್ಕೆ ತೇಜಸ್ ಅರಶಿನಗುಡಿ ಅವರು ಪ್ರತಿರೋಧವ್ಯಕ್ತಪಡಿಸಿದಾಗ ರೋಹಿತ ನಾಯ್ಕ ಅವರು ತಮ್ಮ ಕೈಯಲ್ಲಿದ್ದ ಖಡ್ಗದಿಂದ ತೇಜಸ್ ಅರಶಿನಗುಡಿ ಅವರ ತಲೆಗೆ ಹೊಡೆದಿದ್ದಾರೆ. ಇದರಿಂದ ತೇಜಸ್ ಅವರು ನೆಲಕ್ಕೆ ಬಿದ್ದಿದ್ದು, ಆಗ ಉಳಿದ ನಾಲ್ವರು ಸೇರಿ ಅವರನ್ನು ಕಾಲಿನಿಂದ ತುಳಿದಿದ್ದಾರೆ.
ಈ ಗಲಾಟೆಯಲ್ಲಿ ತೇಜಸ್ ಅರಶಿನಗುಡಿ ಅವರಿಗೆ ತಲೆ, ಕಣ್ಣು, ಮೂಗಿಗೆ ಗಾಯವಾಗಿದೆ. ಅದಾದ ನಂತರ ಆ ನಾಲ್ವರು ಜೀವ ಬೆದರಿಕೆ ಒಡ್ಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ತೇಜಸ್ ಅರಶಿನಗುಡಿ ಅವರು ಪೊಲೀಸರ ಬಳಿ ಹೇಳಿದ್ದು, ದಾಂಡೇಲಿ ನಗರ ಪೊಲೀಸರು ಕೇಸು ಹಾಕಿದ್ದಾರೆ. ಸಿಪಿಐ ಶಿವಾನಂದ ಅಂಬಿಗೇರ್ ಹಾಗೂ ಪಿಐ ಅಮೀನಸಾಬ್ ಅತ್ತಾರ್ ಅವರು ಪ್ರಕರಣದ ತನಿಖೆ ಶುರು ಮಾಡಿದ್ದಾರೆ. ಡಿವೈಎಸ್ಪಿ ಶಿವಾನಂದ ಮದರಖಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.